ಯಾವುದಾದರೂ ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕು ಕಂಡ್ರೆ ಮೂಗು ಮುರಿಯೋರೇ ಜಾಸ್ತಿ.. ಬೆಕ್ಕು ದಾರಿಗೆ ಅಡ್ಡ ಬಂದ್ರೆ ಮುಗಿದೇ ಹೋಯ್ತು. ಕೆಲವರು ಬೆಕ್ಕು ಅಡ್ಡಬಂದಾಗ ತಾವು ಹೊರಟಿದ್ದ ಪ್ರಯಾಣವನ್ನೇ ಮೊಟಕುಗೊಳಿಸಿದೋರು ಇದ್ದಾರೆ. ಆದ್ರೆ, ಇಲಲ್ಲೊಂದು ಗ್ರಾಮವಿದೆ ಇವರಿಗೆ ಬೆಕ್ಕೇ ದೇವರು ಬೆಕ್ಕಿಗೇ ಮೊದಲ ಪೂಜೆ
ಮಂಡ್ಯ(ಅ.24): ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮ. ಹಿಂದೆ ಮಾರ್ಜಾಲಪುರ ಅಂತಾನೂ ಕರೀತಿದ್ದರು.. ಈ ಗ್ರಾಮಕ್ಕೆ ಬೆಕ್ಕೇ ದೇವರು. ಗ್ರಾಮಸ್ಥರು ಶುಭಕಾರ್ಯಕ್ಕೆ ಹೋಗುವ ಮುನ್ನ ಅಥವಾ ಒಂದು ಕೆಲಸ ಆರಂಭಿಸುವ ಮುನ್ನ ಮೊದಲು ಬೆಕ್ಕಿನ ದರ್ಶನ ಪಡೆಯೋದು ಗ್ರಾಮದ ಅಲಿಖಿತ ನಿಯಮ.
ಗ್ರಾಮದಲ್ಲಿ ಮೂರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಮಂಗಳವಾರ ತಮ್ಮೂರಿನ ಈ ಮೂರು ದೇವಸ್ಥಾನದಲ್ಲಿ ಬೆಕ್ಕಿನ ಮಂಗಮ್ಮನಿಗೆ ವಿಶೇಷ ಪೂಜೆ ನಡೆಯುತ್ತೆ. ವರ್ಷಕ್ಕೊಮ್ಮೆ ಜಾತ್ರೆ ಕೂಡ ನಡೆಯುತ್ತೆ. ಅಷ್ಟೇ ಅಲ್ಲ, ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆಕೊಟ್ಟು ಬೆಕ್ಕು ಬಿಟ್ಟ ಎಂಜಲನ್ನೇ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಪ್ರತಿಮನೆಯಲ್ಲೂ ಹಾಲು ಕರೆದು ಮೊದಲು ನೀಡೋದೆ ಬೆಕ್ಕಿಗೆ.
ಇನ್ನೂ ಗ್ರಾಮದಲ್ಲಿ ಬೆಕ್ಕು ಸತ್ತರೆ ಮನುಷ್ಯರಂತೆ ಶವಸಂಸ್ಕಾರ ಮಾಡುತ್ತಾರೆ. ಅಲ್ಲದೆ ಯಾರೂ ಬೆಕ್ಕನ್ನು ಹೊಡೆಯಲ್ಲ. ಅಪ್ಪಿ ತಪ್ಪಿ ಹೊಡೆದವರು ಉದ್ದಾರಾಗಿಲ್ಲ ಅನ್ನೋದನ್ನ ಸಾಕ್ಷಿ ಸಮೇತ ಬಿಚ್ಚಿಡುತ್ತಾರೆ ಗ್ರಾಮಸ್ಥರು.
ಮದುವೆ ಮುಂಜಿಯಂತಹ ಕಾರ್ಯಗಳು ಬೆಕ್ಕಿನ ದರ್ಶನವಿಲ್ಲದೆ ನಡೆಯೋದೇ ಇಲ್ಲ. ಒಟ್ಟಿನಲ್ಲಿ ಬೆಕ್ಕನ್ನ ಅನಿಷ್ಟ ಪ್ರಾಣಿ ಎಂದು ಜನ ದೂರವಿಡುವಾಗ. ಈ ಗ್ರಾಮಸ್ಥರು ದೇವತಾ ಸ್ವರೂಪಿಯಾಗಿ ನೋಡುತ್ತಿರೋದು ನಿಜಕ್ಕೂ ಅಚ್ಚರಿ.
