ದುಬಾರಿ ವೆಚ್ಚದಲ್ಲಿ ಉತ್ಪತ್ತಿಯಾಗುವ ರಾಯಚೂರು ಕಲ್ಲಿದ್ದಲು ವಿದ್ಯುತ್‌ ಘಟಕಗಳಿಗೆ ಈಗ ಬಹುತೇಕ ವಿಶ್ರಾಂತಿ ನೀಡಲಾಗಿದೆ.ಜಲವಿದ್ಯುತ್‌ ಘಟಕಗಳು ಈಗ ನಿರಂತರವಾಗಿ ವಿದ್ಯುತ್‌ ಉತ್ಪಾದಿಸುತ್ತಿವೆ.

ಕಾರವಾರ :  ಭಾರಿ ಮಳೆಯು ಕಡಿಮೆ ವೆಚ್ಚದಲ್ಲಿ ವಿದ್ಯುತ್‌ ಉತ್ಪಾದನೆಗೆ ವರವಾಗಿದೆ. ವ್ಯರ್ಥವಾಗಿ ಹರಿದು ಬಿಡುವ ನೀರನ್ನು ಸಂಪೂರ್ಣವಾಗಿ ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳಲು ಕರ್ನಾಟಕ ವಿದ್ಯುತ್‌ ನಿಗಮ(ಕೆಪಿಸಿ) ಮುಂದಾಗಿದೆ. ದುಬಾರಿ ವೆಚ್ಚದಲ್ಲಿ ಉತ್ಪತ್ತಿಯಾಗುವ ರಾಯಚೂರು ಕಲ್ಲಿದ್ದಲು ವಿದ್ಯುತ್‌ ಘಟಕಗಳಿಗೆ ಈಗ ಬಹುತೇಕ ವಿಶ್ರಾಂತಿ ನೀಡಲಾಗಿದೆ.

ಜಲವಿದ್ಯುತ್‌ ಘಟಕಗಳು ಈಗ ನಿರಂತರವಾಗಿ ವಿದ್ಯುತ್‌ ಉತ್ಪಾದಿಸುತ್ತಿದ್ದರೆ, ಕಲ್ಲಿದ್ದಲು ವಿದ್ಯುತ್‌ ಘಟಕಗಳು ಸದ್ದು ಕಡಿಮೆ ಮಾಡಿವೆ. ಗುರುವಾರ ರಾಜ್ಯದ ಎಲ್ಲ ವಿದ್ಯುತ್‌ ಯೋಜನೆಗಳಿಂದ ಒಟ್ಟು 4022 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗಿದ್ದರೆ, ಇದರಲ್ಲಿ ಕೇವಲ 568 ಮೆ.ವ್ಯಾ. ಮಾತ್ರ ರಾಯಚೂರು ಥರ್ಮಲ್‌ ಪವರ್‌ ಸ್ಟೇಶನ್‌ನಲ್ಲಿ ಉತ್ಪಾದಿಸಲಾಗಿದೆ. ಉಳಿದೆಲ್ಲ ವಿದ್ಯುತ್ತನ್ನು ಜಲ ವಿದ್ಯುತ್‌ ಯೋಜನೆಯಿಂದಲೇ ಉತ್ಪಾದಿಸಲಾಗಿದೆ. ಶರಾವತಿ ವಿದ್ಯುದಾಗಾರದಲ್ಲಿ 962 ಮೆವ್ಯಾ, ಉತ್ತರ ಕನ್ನಡದ ಸುಪಾ ಹಾಗೂ ನಾಗಝರಿ ವಿದ್ಯುತ್‌ ಘಟಕಗಳಲ್ಲಿ 850, ಗೇರುಸೊಪ್ಪದಲ್ಲಿ 210, ವಾರಾಹಿಯಲ್ಲಿ 415 ಮೆವ್ಯಾ ಉತ್ಪಾದಿಸಲಾಗಿದೆ.

ರಾಯಚೂರು ಕಲ್ಲಿದ್ದಲಿನ (ಆರ್‌ಟಿಪಿಎಸ್‌) 5 ವಿದ್ಯುತ್‌ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಕೇವಲ ಮೂರು ಘಟಕಗಳು ಮಾತ್ರ ವಿದ್ಯುತ್‌ ಉತ್ಪಾದಿಸಿವೆ. 1720 ಮೆವ್ಯಾ ಸಾಮರ್ಥ್ಯದ ಆರ್‌ಟಿಪಿಎಸ್‌ನಲ್ಲಿ ಕೇವಲ 562 ಮೆವ್ಯಾ ವಿದ್ಯುತ್‌ ಉತ್ಪಾದಿಸಲಾಗಿದೆ. ಬಿಟಿಪಿಎಸ್‌ ಹಾಗೂ ವೈಟಿಪಿಎಸ್‌ನಲ್ಲೂ ವಿದ್ಯುತ್‌ ಉತ್ಪಾದಿಸಲಾಗಿಲ್ಲ.

ಕಲ್ಲಿದ್ದಲಿನಿಂದ ವಿದ್ಯುತ್‌ ಉತ್ಪಾದನೆ ದುಬಾರಿಯಾಗುತ್ತದೆ. ಜತೆಗೆ ಕಲ್ಲಿದ್ದಲು ಬೇಡಿಕೆ ಇದ್ದಷ್ಟುಸಿಗದು. ಅಭಾವ ತೀವ್ರವಾಗಿದೆ. ಹೀಗಾಗಿ ಇರುವ ಕಲ್ಲಿದ್ದಲನ್ನು ಸಂಗ್ರಹಿಸಿಟ್ಟುಕೊಳ್ಳುವುದು, ವ್ಯರ್ಥವಾಗಿ ಹರಿದುಹೋಗುವ ನೀರಿನಿಂದ ಅತಿ ಕಡಿಮೆ ಬೆಲೆಯಲ್ಲಿ ವಿದ್ಯುತ್‌ ಉತ್ಪಾದನೆ ಮಾಡುವ ಉದ್ದೇಶದಿಂದ ಕೆಪಿಸಿ ಕಳೆದ ಎರಡು ದಿನಗಳಿಂದ ಜಲವಿದ್ಯುತ್‌ನತ್ತ ಮುಖ ಹೊರಳಿಸಿದೆ. ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಲಿದೆ. ಆಗ ಥರ್ಮಲ್‌ ವಿದ್ಯುತ್‌ ಉತ್ಪಾದನೆ ಅನಿವಾರ್ಯ.

ಕಡಿಮೆ ವೆಚ್ಚ:

ನಾಗಝರಿ ಹಾಗೂ ಸುಪಾ ಜಲ ವಿದ್ಯುತ್‌ ಘಟಕಗಳು ಕೇವಲ 72 ಪೈಸೆಗೆ ಒಂದು ಯುನಿಟ್‌ ವಿದ್ಯುತ್ತನ್ನು ಕೆಪಿಟಿಸಿಎಲ್‌ಗೆ ಮಾರಾಟ ಮಾಡುತ್ತಿವೆ. ಕಲ್ಲಿದ್ದಲು ವಿದ್ಯುತ್‌ ಉತ್ಪಾದನಾ ವೆಚ್ಚ ಇದರ 3- 4 ಪಟ್ಟು ಹೆಚ್ಚು ಇರುತ್ತದೆ. ಹೀಗಾಗಿ ಕೆಪಿಸಿಯು ನೀರನ್ನು ಬಳಸಿಕೊಳ್ಳುವ ಜತೆಗೆ ಲಾಭ ಹಾನಿಯ ಲೆಕ್ಕಾಚಾರವನ್ನೂ ಮಾಡಿ ಜಲ ವಿದ್ಯುತ್ತನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ.


ಪವನ ವಿದ್ಯುತ್‌, ಸೋಲಾರ್‌ ವಿದ್ಯುತ್‌ ಒಪ್ಪಂದದಂತೆ ರಾಜ್ಯಕ್ಕೆ ಬರುತ್ತಿದೆ. ಉಳಿದ ವಿದ್ಯುತ್‌ನಲ್ಲಿ ಸಿಂಹಪಾಲು ಈಗ ಜಲವಿದ್ಯುತ್‌ನದ್ದಾಗಿದೆ. ನೀರು ವ್ಯರ್ಥವಾಗುವುದನ್ನು ತಡೆಯಲು ಮತ್ತು ಕಡಿಮೆ ವೆಚ್ಚದಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

-ಅಬ್ದುಲ್‌ ಮಜೀದ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಸುಪಾ.

ವಸಂತಕುಮಾರ್‌ ಕತಗಾಲ