ವಿಜಯಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ ಅವರ ಮನೆಗೆ ಕನ್ನ ಹಾಕಿದ ಕಳ್ಳರು ಫಾರ್ಚೂನರ್‌ ಕಾರು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. 

ನಗರದ ಕನಕದಾಸ ಬಡಾವಣೆಯಲ್ಲಿರುವ ಅಧ್ಯಕ್ಷರ ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ನಗನಾಣ್ಯ ದೋಚಿದ್ದಾರೆ. ಜಿ ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಅಧ್ಯಕ್ಷೆ ಮೇಟಿ ಅವರು ಬುಧವಾರ ಬೆಂಗಳೂರಿಗೆ ತೆರಳಿದ್ದರು. 

ಗುರುವಾರ ವಿಜಯಪುರಕ್ಕೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಬುಧವಾರ ರಾತ್ರಿ ಮನೆಯ ಹಿಂಬದಿಯ ಬಾಗಿಲು ಬೀಗ ಮುರಿದು ಒಳನುಗ್ಗಿದ ಕಳ್ಳರು .3.50 ಲಕ್ಷ ನಗದು, 150 ಗ್ರಾಂ ಚಿನ್ನಾಭರಣ, 5 ಕೈಗಡಿಯಾರ ಹಾಗೂ ಲಕ್ಷಾಂತರ ಮೌಲ್ಯದ ಫಾರ್ಚೂನರ್‌ ಕಾರು ದೋಚಿ ಪರಾರಿಯಾಗಿದ್ದಾರೆ. ನಸುಕಿನ ಜಾವ 3.50ರ ಸುಮಾರಿಗೆ ಬೆಂಗಳೂರಿನಿಂದ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.