Asianet Suvarna News Asianet Suvarna News

ಅಸ್ಸಾಂನಲ್ಲೇಕೆ ಪ್ರತಿ ವರ್ಷ ಪ್ರವಾಹ?

ಅಸ್ಸಾಂ ಈಶಾನ್ಯ ರಾಜ್ಯಗಳಲ್ಲೇ ಅತ್ಯಂತ ಸುಂದರ ಹಾಗೂ ದೊಡ್ಡ ರಾಜ್ಯ. ಅಲ್ಲಿನ ನಿಸರ್ಗ ಸೌಂದರ್ಯ, ಸಸ್ಯ ಸಂಪತ್ತು, ಪ್ರಾಣಿ ಸಂಕುಲ, ವಿಶಿಷ್ಟಸಂಸ್ಕೃತಿ, ಸಂಗೀತ ಉಡುಗೆಗೆ ಮರುಳಾಗದವರಿಲ್ಲ. ಪ್ರವಾಸಿಗರಿಗೆ ಪ್ರಿಯವಾಗಿರುವ ಈ ರಾಜ್ಯ ಪ್ರತಿ ವರ್ಷ ಮಾನ್ಸೂನ್‌ ಬಂತೆಂದರೆ ಅಕ್ಷರಶಃ ತತ್ತರಿಸುತ್ತದೆ. ಅಪಾರ ಪ್ರಮಾಣದ ಪ್ರಾಣ ಹಾನಿ, ಆಸ್ತಿಪಾಸ್ತಿ ಹಾನಿಯುಂಟಾಗುತ್ತದೆ. ಈ ವರ್ಷವೂ ಮಹಾ ಮಳೆಯಿಂದಾಗಿ ಇಡೀ ರಾಜ್ಯವೇ ಸಂಕಷ್ಟಕ್ಕೀಡಾಗಿದೆ.

The Reasons Why Assam witnesses flood every year
Author
Bangalore, First Published Jul 25, 2019, 11:34 AM IST

ಅಸ್ಸಾಂನಲ್ಲಿ ಏನಾಗುತ್ತಿದೆ?

ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ ಈವರೆಗೆ 31 ತಾಲೂಕುಗಳ, 4000 ಗ್ರಾಮಗಳ 53 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. 66 ಜನ ಮೃತಪಟ್ಟಿದ್ದಾರೆ. ಅಸ್ಸಾಂನ ಒಟ್ಟು ಜನಸಂಖ್ಯೆಯೇ 3 ಕೋಟಿ. ಅದರಲ್ಲಿ 53 ಲಕ್ಷ ಜನರ ಬದುಕು ಮೂರಾಬಟ್ಟೆಯಾಗಿದೆ. ಸುಮಾರು 1000ಕ್ಕೂ ಹೆಚ್ಚು ಮನೆಗಳು ಮಣ್ಣು ಪಾಲಾಗಿವೆ. 187 ಪ್ರಾಣಿಗಳು ನೀರುಪಾಲಾಗಿವೆ. 16 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಮಳೆಗೆ ತತ್ತರಿಸಿವೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ 95% ಭಾಗ ಹಾನಿಗೊಳಗಾಗಿದೆ. 2 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಹಾಳಾಗಿದೆ. 1.5 ಲಕ್ಷ ಜನರನ್ನು ಈವರೆಗೆ ಪ್ರವಾಹಪೀಡಿತ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.

ಮಳೆಗಾಲ ಬಂತೆಂದರೆ ನಡುಕ!

ರಾಜ್ಯದ 40% ಭೂಪ್ರದೇಶವು ಪ್ರವಾಹಪೀಡಿತ ಪ್ರದೇಶ. 1950ರಿಂದೀಚೆಗೆ 12 ಭೀಕರ ಪ್ರವಾಹಕ್ಕೆ ರಾಜ್ಯ ಸಾಕ್ಷಿಯಾಗಿದೆ. ಮಳೆಗಾಲ ಪ್ರಾರಂಭವಾಯಿತೆಂದರೆ ಅಸ್ಸಾಂನಲ್ಲಿ ಪ್ರವಾಹ ತೀರಾ ಸಾಮಾನ್ಯ. 1988, 1998 ಮತ್ತು 2004ರಲ್ಲಿ ಮಹಾಮಳೆಯಿಂದ ಊಹಿಸಲೂ ಆಗದ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. 2004ರ ಪ್ರವಾಹದಲ್ಲಿ 1.24 ಕೋಟಿ ಜನರು ಸಿಲುಕಿದ್ದರು. 2012ರಲ್ಲಿ 124 ಜನರು, 2015ರಲ್ಲಿ 42 ಜನರು, 2016ರಲ್ಲಿ 28 ಜನರು 2017ರಲ್ಲಿ 85 ಜನರು ಮತ್ತು 2018ರಲ್ಲಿ 12 ಜನ ಮೃತಪಟ್ಟಿದ್ದಾರೆ.

ಕೇಂದ್ರ ಜಲ ಆಯೋಗದ ಅಂಕಿಅಂಶಗಳ ಪ್ರಕಾರ (1953-2016) ಪ್ರತಿವರ್ಷ ಸರಾಸರಿ 26 ಲಕ್ಷ ಜನರು ಅಸ್ಸಾಂನಲ್ಲಿ ಪ್ರವಾಹಕ್ಕೆ ಸಿಲುಕುತ್ತಾರೆ. ಒಟ್ಟಾರೆ ಹಾನಿ 128 ಕೋಟಿಯಷ್ಟಾಗುತ್ತದೆ. ಅಸ್ಸಾಂ ಸಹಜವಾಗಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಪ್ರತಿ ಗಂಟೆಗೆ ಕನಿಷ್ಠ 40 ಮಿಲಿ ಮೀಟರ್‌ನಿಂದ ಗರಿಷ್ಠ 70 ಎಂಎಂನಂತೆ ವರ್ಷಕ್ಕೆ 248 ಸೆಂ.ಮಿ.ನಿಂದ 635 ಸೆಂ.ಮೀ. ಮಳೆಯಾಗುತ್ತದೆ.

ಬ್ರಹ್ಮಪುತ್ರ ನದಿಯೇ ದೊಡ್ಡ ಸಮಸ್ಯೆ

ಅಸ್ಸಾಂ ಪ್ರತಿ ವರ್ಷ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗುತ್ತದೆ. ಈ ವರ್ಷ ಮುಂಗಾರಿನ ಆರಂಭದಲ್ಲೇ ಮಳೆಯ ಅವಾಂತರಕ್ಕೆ ಸಿಲುಕಿ ಅಪಾರ ಆಸ್ತಿ-ಪಾಸ್ತಿ ಪ್ರಾಣ ಹಾನಿಯುಂಟಾಗಿದೆ. ಇದಕ್ಕೆ ಮೂಲ ಕಾರಣ ಅಲ್ಲಿ ಹರಿಯುವ ಬ್ರಹ್ಮಪುತ್ರ ನದಿ. ಅದು ಅಸ್ಥಿರ ಸ್ವಭಾವ ಹಾಗೂ ಹರಿವು ಹೊಂದಿರುವ ನದಿ. ಚೀನಾ, ಭಾರತ, ಬಾಂಗ್ಲಾದೇಶ ಮತ್ತು ಭೂತಾನ್‌ ದೇಶಗಳ 5,80,000 ಚದರ ಕಿ.ಮೀ. ಪ್ರದೇಶದಲ್ಲಿ ಈ ನದಿ ಹರಿಯುತ್ತದೆ. ಅತಿ ಹೆಚ್ಚು ರಾಡಿ/ ಕೆಸರು ಹೊರಹಾಕುವ ಜಗತ್ತಿನ ಪ್ರಮುಖ 5 ನದಿಗಳಲ್ಲಿ ಬ್ರಹ್ಮಪುತ್ರ ಕೂಡ ಒಂದು. ಪ್ರತಿ ಸೆಕೆಂಡ್‌ಗೆ 19,830 ಕ್ಯೂಬಿಕ್‌ ಮೀಟರ್‌ ಕೆಸರನ್ನು ಇದು ಹೊರಹಾಕುತ್ತದೆ. 2008ರಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಪ್ರತಿ ಚದರ ಕಿ.ಮೀ.ಗೆ ಬ್ರಹ್ಮಪುತ್ರ ನದಿಯಲ್ಲಿ ಉತ್ಪತ್ತಿಯಾಗುವ ಕೆಸರಿನ ಪ್ರಮಾಣ 1403 ಟನ್‌.

ಕೆಸರಿಗೂ ಪ್ರವಾಹಕ್ಕೂ ಸಂಬಂಧವೇನು?

ಪ್ರತಿ ವರ್ಷ ಅಗಾಧ ಪ್ರಮಾಣದ ಕೆಸರು ನದಿಯ ಉಗಮಸ್ಥಳವಾದ ಟಿಬೆಟ್‌ನಿಂದ ಹರಿದು ಬರುತ್ತದೆ. ಆ ಪ್ರದೇಶವು ಶೀತಮಯವಾಗಿ, ಶುಷ್ಕವಾಗಿದ್ದು, ಅಲ್ಲಿ ಹೆಚ್ಚು ಗಿಡಮರಗಳೂ ಇಲ್ಲ. ಹಿಮನದಿಗಳು ಕರಗುವುದರಿಂದ, ಮಣ್ಣಿನ ಸವಕಳಿಯ ಪರಿಣಾಮ ನದಿಯಲ್ಲಿ ಅಗಾಧ ಪ್ರಮಾಣದ ಮಡ್ಡಿ ಉತ್ಪತ್ತಿಯಾಗುತ್ತದೆ. ಈ ನದಿ ಅಸ್ಸಾಂ ಪ್ರವೇಶಿಸುವ ವೇಳೆ ಆ ಹೂಳೆಲ್ಲಾ ಅಸ್ಸಾಂಗೆ ಸಾಗಿಸುತ್ತದೆ. ಅದು ಮಣ್ಣಿನ ಸವೆತ ಮತ್ತು ಪ್ರವಾಹಕ್ಕೆ ಮೂಲ ಕಾರಣವಾಗುತ್ತದೆ. ನದಿಯು ಇಳಿಜಾರು ಪ್ರದೇಶದಿಂದ ಸಮತಟ್ಟಾದ ಪ್ರದೇಶದೆಡೆಗೆ ಹರಿದುಬರುವುದರಿಂದ ನದಿಯಲ್ಲಿ ಹೆಚ್ಚು ಹೂಳು ತುಂಬಿಕೊಳ್ಳುತ್ತದೆ. ಅಲ್ಲದೆ ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯ ಎರಡೂ ಕಡೆ ಕಾಡು ಆವರಿಸಿದೆ. ಆಗಾಗ ಉಂಟಾಗುವ ಭುಕುಸಿತ ಮತ್ತು ಪ್ರವಾಹದಿಂದಾಗಿ ಹೆಚ್ಚು ಪ್ರಮಾಣದ ಕೆಸರು ಬ್ರಹ್ಮಪುತ್ರ ನದಿ ಸೇರುತ್ತದೆ. ಅದು ನದಿಯ ನೀರು ಶೇಖರಣಾ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ನದಿಯಲ್ಲಿರುವ ಹೂಳು ತೆಗೆಯಲು ಯೋಜನೆಯನ್ನೇನೋ ಸಿದ್ಧಪಡಿಸಲಾಗಿದೆ. ಆದರೆ ಅದಿನ್ನೂ ಅನುಷ್ಠಾನಗೊಂಡಿಲ್ಲ. ಅದರ ಜೊತೆಗೆ ಮಾನವ ನಿರ್ಮಿತ ಕಾರಣಗಳಾದ ಅರಣ್ಯ ನಾಶ, ಜನಸಂಖ್ಯೆ ಹೆಚ್ಚಳ, ನದಿಯ ಒತ್ತುವರಿ, ಅಣೆಕಟ್ಟುಗಳ ನಿರ್ಮಾಣ ಮುಂತಾದ ಕಾರಣದಿಂದಾಗಿ ಅಸ್ಸಾಂ ಪ್ರತಿ ವರ್ಷ ಪ್ರವಾಹದಿಂದ ಅಪಾರ ನಷ್ಟಅನುಭವಿಸುತ್ತಿದೆ.

ಇದು ಆರಂಭ ಅಷ್ಟೇ!

ಜುಲೈ ತಿಂಗಳಲ್ಲೇ ಅಸ್ಸಾಂಗೆ ಇಷ್ಟೊಂದು ಭೀಕರವಾದ ಮುಂಗಾರು ಅಪ್ಪಳಿಸಿರುವುದು ಇದೇ ಮೊದಲು. ಸಾಮಾನ್ಯವಾಗಿ ಅಕ್ಟೋಬರ್‌ ತಿಂಗಳ ಮಧ್ಯಭಾಗದಲ್ಲಿ ಅಸ್ಸಾಂನಲ್ಲಿ ಪ್ರವಾಹ ಉಂಟಾಗುತ್ತದೆ. ಹಾಗಾಗಿ ಸದ್ಯದ ಮಳೆ ಅಷ್ಟೇನೂ ಭೀಕರವಲ್ಲ, ಇನ್ನೂ ಭೀಕರ ಮಳೆಗೆ ಸಾಕ್ಷಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಳೆಗಾಲ ಅಂತ್ಯವಾಗುವವರೆಗೆ ಇಂಥದ್ದೇ ಎರಡು ಅಥವಾ ಮೂರು ಭೀಕರ ಮಳೆ ಎದುರಾಗಬಹುದು ಎಂದು ತಜ್ಞರು ಊಹಿಸುತ್ತಿದ್ದಾರೆ.

ಪ್ರವಾಹ ತಡೆಗೆ ಸರ್ಕಾರ ಏನು ಮಾಡಿದೆ?

ಬ್ರಹ್ಮಪುತ್ರ ಮಂಡಳಿಯು ಪ್ರವಾಹ ತಡೆಯಲು ನದಿಗೆ ಅಡ್ಡಲಾಗಿ ಡ್ಯಾಮ್‌ ಮತ್ತು ಜಲಾಶಯಗಳನ್ನು ನಿರ್ಮಾಣ ಮಾಡುವಂತೆ 1982ರಲ್ಲಿ ಸಲಹೆ ನೀಡಿತ್ತು. ಆದರೆ ಇದು ಎರಡು ಅಲಗಿನ ಕತ್ತಿಯಂತೆ. ಪ್ರವಾಹದ ನೀರನ್ನು ಇದು ತಡೆಹಿಡಿದರೂ, ಕಾಲುವೆಗಳ ಸಾಮರ್ಥ್ಯ ಮೀರಿ ನೀರು ಧುಮ್ಮಿಕ್ಕುವ ಸಾಧ್ಯತೆ ಇರುತ್ತದೆ. ಆಗ ಕೆಳಭಾಗದ ಜನರು ನೀರು ಪಾಲಾಗಬೇಕಾಗುತ್ತದೆ. ಇದೇ ಕಾರಣಕ್ಕೆ ಅಲ್ಲಿನ ಸ್ಥಳೀಯರು ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಭೀಕರ ಮಳೆಗೆ ತತ್ತರಿಸಿರುವ ಪ್ರದೇಶಗಳಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ‍್ಯವು ಪ್ರಗತಿಯಲ್ಲಿದೆ. ರಾಜ್ಯದ ಹಲವೆಡೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರ ಕೂಡ 251 ಕೋಟಿ ತರ್ತು ನಿಧಿ ನೀಡಿದೆ. ಕ್ರೀಡಾಪಟು ಹಿಮಾದಾಸ್‌, ನಟ ಅಕ್ಷಯ್‌ ಕುಮಾರ್‌ ಮತ್ತಿತರರು ಅಸ್ಸಾಂ ಪ್ರವಾಹದಲ್ಲಿ ಸಿಲುಕಿದವರು ರಕ್ಷಣೆಗೆ ಧನಸಹಾಯ ನೀಡಿದ್ದಾರೆ.

Follow Us:
Download App:
  • android
  • ios