ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದರೂ, ಈ ಹುದ್ದೆ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ನವದೆಹಲಿ(ಮೇ.16): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದರೂ, ಈ ಹುದ್ದೆ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್'ನ ನಾಯಕರಾಗಿರುವ ಖರ್ಗೆ, ಬೇರೆ ಪಕ್ಷದಿಂದ ಬಂದ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಿರುವಾಗ ತಾವೇಕೆ ಈಗ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಎರಡು ಬಾರಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದರೂ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಸ್ಪಷ್ಟವಾಗುತ್ತಿಲ್ಲ. ಖರ್ಗೆ ಹೆಸರು ಕಳೆದ ಒಂದು ವಾರದಿಂದ ಕೇಳಿ ಬರುತ್ತಿದೆಯಾದರೂ ಖರ್ಗೆಗೆ, ದೆಹಲಿ ಬಿಟ್ಟು ಬರಲು ಇಷ್ಟವಿಲ್ಲ ಅಂತ ಹೇಳಲಾಗುತ್ತಿದೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿ ಕೂರಿಸಿರುವಾಗ ನಾನೇಕೆ ಈಗ ಪಕ್ಷದ ಜವಾಬ್ದಾರಿ ಹೊರಲಿ ಎಂದು ಹೈಕಮಾಂಡ್'ನ ಕೆಲ ನಾಯಕರ ಮುಂದೆ ಖರ್ಗೆ ಹೇಳಿಕೊಂಡಿದ್ದಾರೆ ಅಂತ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭಕ್ಕೆ ಮೂಲಗಳು ತಿಳಿಸಿವೆ.
