ಅಜ್ಜಿಯ ಮನೆಯಲ್ಲಿದ್ದ ಬಾಲಕಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆರೋಪಿ ಮಹೇಶನು ಬಲವಂತವಾಗಿ ಅತ್ಯಾಚಾರವೆಸಗುತ್ತಿದ್ದ. ಅಲ್ಲದೇ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ.

ಶಿವಮೊಗ್ಗ(ಡಿ.13): ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಹೊಸನಗರ ತಾಲೂಕು ಬನಶೆಟ್ಟಿ ಗ್ರಾಮದ ಮಹೇಶ (27) ಎಂಬ ಆರೋಪಿಗೆ ಕಲಂ 8 ಪೋಕ್ಸೋ ಕಾಯ್ದೆಯಡಿ ತಪ್ಪಿತಸ್ಥನೆಂದು ತೀರ್ಮಾನಿಸಿ ಜೀವಾವಧಿ ಕಠಿಣಶಿಕ್ಷೆ ಹಾಗೂ ರು. 35 ಸಾವಿರ ದಂಡ ವಿಧಿಸಿ ಶಿವಮೊಗ್ಗದ 1ನೇ ಹೆಚ್ಚುವರಿ ನ್ಯಾಯಾಧೀಶರಾದ ಶುಭಾಗೌಡರ್ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಅಜ್ಜಿಯ ಮನೆಯಲ್ಲಿದ್ದ ಬಾಲಕಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆರೋಪಿ ಮಹೇಶನು ಬಲವಂತವಾಗಿ ಅತ್ಯಾಚಾರವೆಸಗುತ್ತಿದ್ದ. ಅಲ್ಲದೇ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಪ್ರಸ್ತುತ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದು, ತನಿಖೆಯಲ್ಲಿ ಅತ್ಯಾಚಾರವೆಸಗಿರುವುದು ದೃಢಪಟ್ಟಿದ್ದರಿಂದ ಆರೋಪಿ ಮಹೇಶನ ಮೇಲೆ ಕಲಂ 376(2), 506 ಐಪಿಸಿ ಕಲಂ 6 ಪೋಕ್ಸೋ ಕಾಯ್ದೆ- 2012ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ನ್ಯಾಯಾಲಯದ ಆದೇಶದಂತೆ ಆರೋಪಿ ನೀಡುವ ದಂಡದ ಮೊತ್ತದಲ್ಲಿ ರು. 30 ಸಾವಿರ ವನ್ನು ಬಾಧಿತೆಗೆ ಪರಿಹಾರ ರೂಪದಲ್ಲಿ ನೀಡುವಂತೆ ತೀರ್ಪು ನೀಡಿದೆ. ಅಲ್ಲದೆ ನೊಂದ ಬಾಲಕಿಗೆ ಹೆಚ್ಚಿನ ಪರಿಹಾರ ಮೊತ್ತ ನೀಡುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಕೆ.ಮೂರ್ತಿರಾವ್ ವಾದ ಮಂಡಿಸಿದ್ದರು.