Asianet Suvarna News Asianet Suvarna News

ಕಾಂಗ್ರೆಸ್‌ ಮಂತ್ರಿಗಿರಿ ಹಂಚಿಕೆ ಕಗ್ಗಂಟು!

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಿ ಗೆದ್ದ ಬೆನ್ನಲ್ಲೇ ಸಂಪುಟ ಸರ್ಕಸ್‌ ಆರಂಭಗೊಂಡಿದೆ. ಆದರೆ, ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳು ಹಾಗೂ ಪ್ರಬಲ ಸಮುದಾಯಗಳ ಒತ್ತಡದ ಹಿನ್ನೆಲೆಯಲ್ಲಿ ಯಾವ ಸೂತ್ರವನ್ನು ಅನುಸರಿಸಿ ಸಚಿವರ ಯಾದಿ ಅಂತಿಮಗೊಳಿಸಬೇಕು ಎಂಬ ಗೊಂದಲ ಕಾಂಗ್ರೆಸ್‌ ನಾಯಕರನ್ನು ಕಾಡಿದೆ. ಪರಿಣಾಮ ಶುಕ್ರವಾರ ಸುಮಾರು ನಾಲ್ಕು ತಾಸುಗಳ ಸತತ ಚರ್ಚೆಯ ನಂತರವೂ ಅಂತಿಮ ಪಟ್ಟಿಸಿದ್ಧಪಡಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು.
 

The political drama continues in Karnataka

ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಿ ಗೆದ್ದ ಬೆನ್ನಲ್ಲೇ ಸಂಪುಟ ಸರ್ಕಸ್‌ ಆರಂಭಗೊಂಡಿದೆ. ಆದರೆ, ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳು ಹಾಗೂ ಪ್ರಬಲ ಸಮುದಾಯಗಳ ಒತ್ತಡದ ಹಿನ್ನೆಲೆಯಲ್ಲಿ ಯಾವ ಸೂತ್ರವನ್ನು ಅನುಸರಿಸಿ ಸಚಿವರ ಯಾದಿ ಅಂತಿಮಗೊಳಿಸಬೇಕು ಎಂಬ ಗೊಂದಲ ಕಾಂಗ್ರೆಸ್‌ ನಾಯಕರನ್ನು ಕಾಡಿದೆ. ಪರಿಣಾಮ ಶುಕ್ರವಾರ ಸುಮಾರು ನಾಲ್ಕು ತಾಸುಗಳ ಸತತ ಚರ್ಚೆಯ ನಂತರವೂ ಅಂತಿಮ ಪಟ್ಟಿಸಿದ್ಧಪಡಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು.

ವಿಧಾನಸಭೆ ಅಧಿವೇಶನ ಪೂರ್ಣಗೊಳ್ಳುತ್ತಿದ್ದಂತೆಯೇ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ಸಂಪುಟ ಸರ್ಕಸ್‌ ಆರಂಭಿಸಿದರು. ಈ ಸಭೆಗೆ ಜೆಡಿಎಸ್‌ನಿಂದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಎಚ್‌.ಡಿ.ರೇವಣ್ಣ ಆಗಮಿಸಿ ಜೆಡಿಎಸ್‌ ಬಯಸುವ ಖಾತೆಗಳು ಯಾವುವು ಎಂಬ ಪಟ್ಟಿಯನ್ನು ಕಾಂಗ್ರೆಸ್‌ ನಾಯಕರಿಗೆ ನೀಡಿದರು. ಬಹುತೇಕ ಈ ಬಗ್ಗೆ ಒಮ್ಮತ ಮೂಡಿದರೂ ಕೆಲ ಖಾತೆಗಳ ಕೊಡು-ಕೊಳ್ಳುವಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆಲ ನಿರ್ದಿಷ್ಟಖಾತೆಗಳ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಸುವ ಅಗತ್ಯವನ್ನು ಸಭೆ ಮನಗಂಡಿತು.

ಹೀಗಾಗಿ, ತಮ್ಮ ದೆಹಲಿ ಪ್ರವಾಸದ ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ಜತೆ ಚರ್ಚೆ ನಡೆಸುವುದಾಗಿ ಕುಮಾರಸ್ವಾಮಿ ಸಭೆಯಲ್ಲಿದ್ದ ಕಾಂಗ್ರೆಸ್‌ ನಾಯಕರಿಗೆ ತಿಳಿಸಿದರು ಎನ್ನಲಾಗಿದೆ. ಅನಂತರ ಜೆಡಿಎಸ್‌ ನಾಯಕರು ಸಭೆಯಿಂದ ತೆರಳಿದ್ದು, ಕಾಂಗ್ರೆಸ್‌ ನಾಯಕರಾದ ವೇಣುಗೋಪಾಲ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಸತತವಾಗಿ ನಾಲ್ಕು ತಾಸುಗಳವರೆಗೂ ಚರ್ಚೆ ನಡೆಸಿದರು.

ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕಾರಣ ಸಂಪುಟದಲ್ಲಿ ಅವಕಾಶ ದೊರೆಯದವರಿಗೆ ಪಕ್ಷದಲ್ಲಿ ಸ್ಥಾನಮಾನ ಕಲ್ಪಿಸುವ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಅತೃಪ್ತಗೊಳ್ಳುವ ಸಮುದಾಯಗಳಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ. ಇದಲ್ಲದೆ, ಆಕಾಂಕ್ಷಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಎರಡು ಪ್ರಮುಖ ಸೂತ್ರದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಅದು- 1.ಮೊದಲ ಬಾರಿ ಶಾಸಕರಾದವರಿಗೆ ಅವಕಾಶ ನೀಡಬಾರದು. 2. ಸಿದ್ದರಾಮಯ್ಯ ಸಂಪುಟದಲ್ಲಿ ಐದು ವರ್ಷ ಸಂಪೂರ್ಣ ಅಧಿಕಾರ ಪಡೆದ ಸಚಿವರಿಗೆ ಮತ್ತೆ ಅವಕಾಶ ನೀಡಬಾರದು ಮತ್ತು ಇಂತಹವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬೇಕು ಎಂಬುದು.

ಈ ಪೈಕಿ ಮೊದಲ ಬಾರಿಯ ಶಾಸಕರಿಗೆ ಕಾಯುವಂತೆ ಹೇಳುವ ಸೂತ್ರ ಬಳಸಲು ಕಷ್ಟವಿಲ್ಲ. ಆದರೆ, ಕೆಲ ನಿರ್ದಿಷ್ಟಸಮುದಾಯಕ್ಕೆ ಸೇರಿದ ಏಕೈಕ ಶಾಸಕರಿದ್ದಾರೆ ಮತ್ತು ಅವರು ಮೊದಲ ಬಾರಿಗೆ ಆಯ್ಕೆಯಾದವರಾಗಿದ್ದಾರೆ. ಅವರಿಗೆ ಅವಕಾಶ ನೀಡದಿದ್ದರೆ ಆ ಸಮುದಾಯಕ್ಕೆ ಅವಕಾಶವಿಲ್ಲದಂತಾಗುತ್ತದೆ. ಅದಕ್ಕೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗಿಲ್ಲ.

ಇದಲ್ಲದೆ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರು, ತಾವು ಪ್ರತಿನಿಧಿಸುವ ಸಮುದಾಯದ ಪ್ರಭಾವಿ ನಾಯಕರೂ ಆಗಿದ್ದಾರೆ. ಅವರಿಗೆ ಅವಕಾಶ ನಿರಾಕರಿಸಿದರೆ ಸದರಿ ಪ್ರಭಾವಿಗಳು ಪಕ್ಷಕ್ಕೆ ಮಾರಕವಾಗುವಂತಹ ನಿರ್ಧಾರ ಕೈಗೊಂಡರೆ ಏನು ಮಾಡುವುದು ಎಂಬ ಪ್ರಶ್ನೆಯೂ ನಾಯಕರನ್ನು ಕಾಡಿದೆ. ಇದರ ಜತೆಗೆ ಡಿಸಿಎಂ ಪದವಿಗಾಗಿ ಹಲವು ಸಮುದಾಯಗಳು ಪ್ರಬಲ ಬೇಡಿಕೆಯಿಟ್ಟಿವೆ. ಈ ವಿಚಾರ ಹೈಕಮಾಂಡ್‌ ಮಟ್ಟದಲ್ಲೇ ನಿರ್ಧಾರವಾಗಬೇಕಿದೆ. ಇದಲ್ಲದೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಹಾಗೂ ಪರಮೇಶ್ವರ್‌ ಅವರು ತಮ್ಮ ಬೆಂಬಲಿಗರಿಗೂ ಪಟ್ಟಿಯಲ್ಲಿ ಅವಕಾಶ ಕೊಡಿಸುವ ಪ್ರಯತ್ನವನ್ನು ನಡೆಸಿದ್ದಾರೆ ಎನ್ನಲಾಗಿದೆ.

ಇಂತಹ ಸಂಕೀರ್ಣ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲಾವಾರು ಹಾಗೂ ಜಾತಿವಾರು ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಅರ್ಹರ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ನಾಯಕರು ತೊಡಗಿಕೊಂಡಿದ್ದು, ಅಂತಿಮವಾಗಿ ಯಾರು ಸಚಿವರಾಗಿ ಆಯ್ಕೆಯಾಗಬೇಕು ಎಂಬ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ತೀರ್ಮಾನಿಸಿದರು ಎನ್ನಲಾಗಿದೆ.

ಇನ್ನು ಡಾ.ಜಿ. ಪರಮೇಶ್ವರ್‌ ಅವರು ಉಪ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಅವರು ತೆರವುಗೊಳಿಸಬೇಕಿದೆ. ಈ ಹುದ್ದೆಯ ಜತೆಗೆ ಕೆಪಿಸಿಸಿ ಪದಾಧಿಕಾರಿಗಳು ಸಂಪೂರ್ಣವಾಗಿ ಬದಲಾವಣೆಯಾಗಬೇಕಾಗುತ್ತದೆ. ಹೀಗಾಗಿ ಸಂಪುಟದಲ್ಲಿ ಸ್ಥಾನ ನೀಡಲಾಗದವರಿಗೆ ಕೆಪಿಸಿಸಿಯಲ್ಲಿ ಯಾವ ಹುದ್ದೆ ನೀಡಿ ಸಮಾಧಾನ ಪಡಿಸಬಹುದು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎನ್ನಲಾಗಿದೆ. ಜತೆಗೆ, ತೀವ್ರವಾಗಿ ಅತೃಪ್ತಿಗೊಳ್ಳುವ ಸಮುದಾಯಗಳಿಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಲಿನ ನಾಲ್ಕು ಸ್ಥಾನಗಳಿಗೆ ಆಯ್ಕೆ ಮಾಡುವ ವೇಳೆ ಪ್ರಾಮುಖ್ಯತೆ ನೀಡುವ ಕುರಿತು ಚಿಂತನೆ ಮಾಡಲಾಯಿತು ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios