ಪಣಜಿ[ಡಿ.06]: ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಸರಬರಾಜಾಗುವ ಮೀನಿನಲ್ಲಿ ಕ್ಯಾನ್ಸರ್‌ಕಾರಕ ಫಾರ್ಮಾಲಿನ್‌ ಅಂಶವಿದೆ ಎಂಬ ಕಾರಣ ಮುಂದೊಡ್ಡಿ, ಹೊರರಾಜ್ಯದ ಮೀನಿಗೆ ನಿಷೇಧ ಹೇರಿದ್ದ ಗೋವಾ ಸರ್ಕಾರಕ್ಕೆ ಅಲ್ಲಿನ ವ್ಯಾಪಾರಿಗಳು ಸಡ್ಡು ಹೊಡೆದಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಮೀನುಗಳನ್ನು ಗುರುವಾರದಿಂದಲೇ ತರಿಸಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ.

ಆದಾಗ್ಯೂ ಅಧಿಕೃತವಾಗಿ ನಿಷೇಧ ಹಿಂಪಡೆಯಲು ಮನಸ್ಸು ಮಾಡಿಲ್ಲದ ಗೋವಾ ಸರ್ಕಾರ, ಸ್ಥಳೀಯ ಸಣ್ಣ ಮೀನು ವ್ಯಾಪಾರಿಗಳ ಅನುಕೂಲಕ್ಕಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಮೀನು ಆಮದಿಗೆ ಅನುವು ಮಾಡಿಕೊಡುವ ಸುಳಿವು ನೀಡಿದೆ.

ಅ.29ರಂದು ಗೋವಾದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ನೆರೆರಾಜ್ಯದ ಮೀನುಗಳಿಗೆ ನಿಷೇಧ ಹೇರಿತ್ತು. ಹೊರರಾಜ್ಯದ ಮೀನು ಬೇಕೆಂದಾದಲ್ಲಿ ಅನುಮತಿ ಪಡೆಯುವಂತೆ ಸೂಚಿಸಿತ್ತು. ಅದರಂತೆ ಭಾರತೀಯ ಆಹಾರ ಗುಣಮಟ್ಟಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದಿಂದ ಅಗತ್ಯವಿರುವ ಅನುಮತಿಯನ್ನು ಪಡೆದಿದ್ದೇವೆ. ಗುರುವಾರದಿಂದಲೇ ನೆರೆರಾಜ್ಯದಿಂದ ಮೀನುಗಳನ್ನು ಮುಚ್ಚಿದ ಟ್ರಕ್‌ಗಳಲ್ಲಿ ತರಿಸುತ್ತೇವೆ ಎಂದು ಮಡಗಾಂವ್‌ ಸಗಟು ಮೀನು ಮಾರಕಟ್ಟೆಸಂಘದ ಅಧ್ಯಕ್ಷ ಇಬ್ರಾಹಿಂ ಮೌಲಾನಾ ತಿಳಿಸಿದ್ದಾರೆ.