ಮೀನು ಕೆಡದಂತೆ ರಕ್ಷಿಸಲು ಹೊರರಾಜ್ಯದ ಮೀನುಗಾರರು ಫಾರ್ಮಾಲಿನ್‌ ರಾಸಾಯನಿಕ ಸಿಂಪಡಿಸಿ, ಗೋವಾಕ್ಕೆ ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ ಗೋವಾ ಸರ್ಕಾರ ಆರು ತಿಂಗಳ ಕಾಲ ಮೀನು ಆಮದಿಗೆ ನಿಷೇಧ ಹೇರಿದೆ. ನ.12ರ ಸೋಮವಾರದಿಂದ ಈ ನಿಷೇಧ ಜಾರಿಗೆ ಬರಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಮೀನುಗಾರರ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ.

ಪಣಜಿ[ನ.11]: ಹೊರರಾಜ್ಯದಿಂದ ಸರಬರಾಜಾಗುತ್ತಿರುವ ಮೀನಿನಲ್ಲಿ ವಿಷಕಾರಿ ಫಾರ್ಮಾಲಿನ್‌ ರಾಸಾಯನಿಕ ಅಂಶವಿದೆ ಎಂಬ ಕಾರಣ ಮುಂದೊಡ್ಡಿ ಗೋವಾ ಸರ್ಕಾರ ಆರು ತಿಂಗಳ ಕಾಲ ಮೀನು ಆಮದಿಗೆ ನಿಷೇಧ ಹೇರಿದೆ. ನ.12ರ ಸೋಮವಾರದಿಂದ ಈ ನಿಷೇಧ ಜಾರಿಗೆ ಬರಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಮೀನುಗಾರರ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ.

ಮೀನು ಕೆಡದಂತೆ ರಕ್ಷಿಸಲು ಹೊರರಾಜ್ಯದ ಮೀನುಗಾರರು ಫಾರ್ಮಾಲಿನ್‌ ರಾಸಾಯನಿಕ ಸಿಂಪಡಿಸಿ, ಗೋವಾಕ್ಕೆ ಸರಬರಾಜು ಮಾಡುತ್ತಿದ್ದಾರೆ. ಇದು ವಿಷಕಾರಿ ರಾಸಾಯನಿಕವಾಗಿದ್ದು, ಮೀನು ಸೇವಿಸುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣವೊಡ್ಡಿ ಕಳೆದ ಆಗಸ್ಟ್‌ನಲ್ಲಿ ಗೋವಾ ಸರ್ಕಾರ ಹೊರರಾಜ್ಯದ ಮೀನು ಆಮದಿಗೆ ನಿಷೇಧ ಹೇರಿತ್ತು. ಬಳಿಕ ಹಿಂಪಡೆದಿತ್ತು. ಇದೀಗ ಆರು ತಿಂಗಳ ಕಾಲ ಹೊಸದಾಗಿ ನಿಷೇಧ ಜಾರಿಗೊಳಿಸುತ್ತಿದೆ.

ಮೀನಿನ ಗುಣಮಟ್ಟಪರೀಕ್ಷೆಗೆ ಗೋವಾದಲ್ಲಿ ಪ್ರಯೋಗಾಲಯ ತೆರೆಯಲಾಗುತ್ತಿದೆ. ಆರು ತಿಂಗಳಲ್ಲಿ ಆ ಲ್ಯಾಬ್‌ ತಲೆ ಎತ್ತಲಿದ್ದು, ಅಲ್ಲಿವರೆಗೂ ಹೊರರಾಜ್ಯದ ಮೀನುಗಳಿಗೆ ಅವಕಾಶವಿಲ್ಲ. ಆನಂತರ ಆಮದು ಮಾಡಿಕೊಳ್ಳಲಾಗುವುದು ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಶನಿವಾರ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದಲೇ ಗೋವಾಕ್ಕೆ ನಿತ್ಯ 200ರಿಂದ 300 ಟನ್‌ ಮೀನು ಸರಬರಾಜಾಗುತ್ತಿದೆ. ಇದಲ್ಲದೆ ಗೋವಾ ಮಗ್ಗುಲಲ್ಲೇ ಇರುವ ಉತ್ತರ ಕನ್ನಡದಿಂದಲೂ ಸಾಕಷ್ಟುಮೀನು ಹೋಗುತ್ತಿದೆ. ಗೋವಾದ ನಿಷೇಧದಿಂದ ರಾಜ್ಯದ ಮೀನುಗಾರರಿಗೆ ಹೊಡೆತ ಬಿದ್ದಂತಾಗಿದೆ.