ಮೈಸೂರು :  ಒಂದು ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಸೇರಿ ಹಲವು ಭಾಷೆಗಳ ಸಿನಿಮಾಗಳ ಚಿತ್ರೀಕರಣಕ್ಕೆ ಸಾಕ್ಷಿಯಾಗಿದ್ದ ಮೈಸೂರಿನ ಹೆಮ್ಮೆಯ ಪ್ರೀಮಿಯರ್‌ ಸ್ಟುಡಿಯೋ ಈಗ ಇತಿಹಾಸದ ಪುಟ ಸೇರಿದೆ. ಶುಕ್ರವಾರ ಈ ಸ್ಟುಡಿಯೋ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ.

ಪ್ರೀಮಿಯರ್‌ ಸ್ಟುಡಿಯೋ ದಕ್ಷಿಣ ಭಾರತದಲ್ಲೇ ಸಿನಿಮಾ ಚಿತ್ರೀಕರಣಕ್ಕಾಗಿ ಹೆಸರುವಾಸಿಯಾಗಿತ್ತು. ದೇಶದ ವಿವಿಧ ಭಾಷೆಗಳು ಮಾತ್ರವಲ್ಲದೆ ಇಟಲಿ ಹಾಗೂ ಇಂಗ್ಲಿಷ್‌ನ ಕೆಲ ಸಿನಿಮಾಗಳ ಒಳಾಂಗಣ ಚಿತ್ರೀಕರಣವೂ ಇಲ್ಲಿ ನಡೆದಿತ್ತು. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳು ಇಲ್ಲಿ ನಿರ್ಮಾಣಗೊಂಡಿದ್ದವು. ತನ್ಮೂಲಕ ಪ್ರೀಮಿಯರ್‌ ಸ್ಟುಡಿಯೋ ಸಾವಿರಾರು ಮಂದಿಯ ಜೀವನೋಪಾಯಕ್ಕೆ ನೆರವಾಗಿತ್ತು.

ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌, ಅಂಬರೀಶ್‌, ರಜನಿಕಾಂತ್‌, ಅಮಿತಾಭ್‌ ಬಚ್ಚನ್‌, ಎಂ.ಜಿ.ರಾಮಚಂದ್ರನ್‌, ಕಮಲ್‌ ಹಾಸನ್‌, ಜಯಲಲಿತಾ ಸೇರಿ ಅನೇಕ ಘಟಾನುಘಟಿ ನಟ, ನಟಿಯರ ಅನೇಕ ಸಿನಿಮಾಗಳ ಶೂಟಿಂಗ್‌ ಇಲ್ಲಿ ನಡೆದಿದ್ದವು. ಹಿಂದಿಯ ‘ಶೋಲಾ ಔರ್‌ ಶಬ್‌ನಂ’ ನಂಥ ಸಿನಿಮಾವೂ ಇಲ್ಲಿ ಚಿತ್ರೀಕರಣಗೊಂಡಿತ್ತು ಎನ್ನುವುದು ಈ ಸ್ಟುಡಿಯೋದ ಹೆಗ್ಗಳಿಕೆ.

1988ರಲ್ಲಿ ಸಂಜಯ್‌ ಖಾನ್‌ ಅವರು ‘ದಿ ಸ್ವೋರ್ಡ್‌ ಆಫ್‌ ಟಿಪ್ಪು ಸುಲ್ತಾನ್‌’(ಟಿಪ್ಪು ಖಡ್ಗ) ಹಿಂದಿ ಧಾರಾವಾಹಿ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಈ ಸ್ಟುಡಿಯೋದ ಭವಿಷ್ಯವನ್ನೇ ಬದಲಾಯಿಸಿತು. ಘಟನೆಯಲ್ಲಿ 61 ಮಂದಿ ತಂತ್ರಜ್ಞರು, ಕಲಾವಿದರು ಸುಟ್ಟು ಕರಕಲಾಗಿದ್ದರು. ಈ ಆಘಾತದ ಬಳಿಕ ಸ್ಟುಡಿಯೋ ಮಾಲೀಕರಿಗೆ ಭಾರೀ ನಷ್ಟಉಂಟಾಗಿತ್ತು. ಅಲ್ಲದೆ, ಸ್ಟುಡಿಯೋದಲ್ಲಿ ಸಿನಿಮಾಗಳ ಚಿತ್ರೀಕರಣವೂ ಬಹುತೇಕ ಕಡಿಮೆಯಾಯಿತು.

ಚಿತ್ತರಂಜನ್‌ ಮಹಲ್‌:

ಪ್ರೀಮಿಯರ್‌ ಸ್ಟುಡಿಯೋ ಇರುವ ಕಟ್ಟಡವನ್ನು ಒಂದು ಕಾಲದಲ್ಲಿ ಚಿತ್ತರಂಜನ್‌ ಮಹಲ್‌ ಎಂದು ಕರೆಯಲಾಗುತ್ತಿತ್ತು. ಈ ಕಟ್ಟಡ ಮೈಸೂರು ರಾಜಕುಮಾರಿ ಲೀಲಾವತಿ ಅವರಿಗೆ ಸೇರಿದ್ದು, 1954ರಲ್ಲಿ ಎಂ.ಎನ್‌. ಬಸವರಾಜಯ್ಯ ಅವರು ಖರೀದಿಸಿ ಸ್ಟುಡಿಯೋ ಆರಂಭಿಸಿದ್ದರು. ಬಳಿಕ ಈ ಜಾಗದಲ್ಲಿ ಒಂದಷ್ಟುಕಟ್ಟಡಗಳು ತಲೆಎತ್ತಿ ಪ್ರೀಮಿಯರ್‌ ಪ್ರಾಪರ್ಟಿಸ್‌ ಆರಂಭವಾಗಿ, ಸ್ಟುಡಿಯೋದ ಒಂದೊಂದೇ ಭಾಗ ನೆಲಸಮವಾಗಿ ಅನೇಕ ಕಟ್ಟಡಗಳು ತಲೆ ಎತ್ತಿದ್ದವು. ಶುಕ್ರವಾರ ಇಡೀ ಕಟ್ಟಡ ತೆರವುಗೊಳಿಸಲಾಗಿದ್ದು, ಆ ಸ್ಥಳದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣವಾಗಲಿದೆ.