ಇದೇ ವೇಳೆ, ಜಿಎಸ್‌ಟಿ ಕಡಿತಕ್ಕೆ ಕಾರಣವಾಗಿದ್ದು ಗುಜರಾತ್ ಚುನಾವಣೆ. ‘ಥ್ಯಾಂಕ್ಯೂ ಗುಜರಾತ್’ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ

ನವದೆಹಲಿ(ನ.12): ಕೇಂದ್ರ ಸರ್ಕಾರ 200ಕ್ಕೂ ಹೆಚ್ಚು ಸರಕುಗಳ ಜಿಎಸ್‌ಟಿ(ಸರಕು-ಸೇವಾ ತೆರಿಗೆ) ಕಡಿತಗೊಳಿಸಿದ್ದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇರಿದ ಒತ್ತಡ ಹಾಗೂ ಗುಜರಾತ್ ಚುನಾವಣೆಗಳೇ ಕಾರಣ ಎಂದು ಕಾಂಗ್ರೆಸ್ ಪಕ್ಷ ಬಣ್ಣಿಸಿದೆ. ರಾಹುಲ್ ಗಾಂಧಿ ಅವರು ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಟೀಕಿಸಿದ್ದರು. ಜೊತೆಗೆ ದರ ಇಳಿಸದಿದ್ದಲ್ಲಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತ ಸರ್ಕಾರ, ತೆರಿಗೆ ದರ ಇಳಿಸಿದೆ ಎಂದು ಹೇಳಿದೆ.

ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಗುಜರಾತ್ ಕಾಂಗ್ರೆಸ್ ಪ್ರಭಾರಿ ಅಶೋಕ್ ಗೆಹ್ಲೋಟ್, ‘ರಾಹುಲ್ ಗಾಂಧಿ ಹೇರಿದ ಒತ್ತಡ ಹಾಗೂ ಚುನಾವಣೆ ಎದುರಿಸುತ್ತಿರುವ ಗುಜರಾತ್‌ನಲ್ಲಿ ಅವರಿಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಗೆ ಹೆದರಿ ಮೋದಿ ಸರ್ಕಾರ ಜಿಎಸ್‌ಟಿ ಕಡಿತಗೊಳಿಸಿತು’ ಎಂದಿದ್ದಾರೆ. ಇದೇ ವೇಳೆ, ಜಿಎಸ್‌ಟಿ ಕಡಿತಕ್ಕೆ ಕಾರಣವಾಗಿದ್ದು ಗುಜರಾತ್ ಚುನಾವಣೆ. ‘ಥ್ಯಾಂಕ್ಯೂ ಗುಜರಾತ್’ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಉದ್ಯಮಿಗಳನ್ನು ಓಲೈಸಲು ಸರ್ಕಾರ ಜಿಎಸ್ಟಿ ಕಡಿತ ಮಾಡಿದೆ ಎಂಬರ್ಥದಲ್ಲಿ ಚಿದು ಈ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.