ಈ ಹಿಂದೆ ಪೆಟ್ರೋಲ್ ಬಂಕ್‌ಗಳಲ್ಲಿ ತೈಲ ವಿತರಿಸುವ ಯಂತ್ರ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡಿದ್ದ ಪ್ರಶಾಂತ್‌ಗೆ, ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದಿತ್ತು. ಇದನ್ನು ಆಧರಿಸಿ ಆತ ಚೀನಾದಲ್ಲಿ ಲಭ್ಯವಿರುವ ಸಾಫ್ಟ್‌ವೇರ್ ಚಿಪ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ.

ಮುಂಬೈ(ಜು.13): ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಪೆಟ್ರೋಲ್ ಬಂಕ್‌ಗಳಲ್ಲಿನ ತೈಲ ಕಳ್ಳತನ ಪ್ರಕರಣದ ಪ್ರಮುಖ ರೂವಾರಿಯೊಬ್ಬನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು, ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಮಹಾರಾಷ್ಟ್ರ ಮೂಲದ ಪ್ರಶಾಂತ್ ನೂಲ್ಕರ್ (56) ಎಂದು ಗುರುತಿಸಲಾಗಿದೆ.

ಈ ಹಿಂದೆ ಪೆಟ್ರೋಲ್ ಬಂಕ್‌ಗಳಲ್ಲಿ ತೈಲ ವಿತರಿಸುವ ಯಂತ್ರ ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡಿದ್ದ ಪ್ರಶಾಂತ್‌ಗೆ, ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದಿತ್ತು. ಇದನ್ನು ಆಧರಿಸಿ ಆತ ಚೀನಾದಲ್ಲಿ ಲಭ್ಯವಿರುವ ಸಾಫ್ಟ್‌ವೇರ್ ಚಿಪ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ.

ಬಳಿಕ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಒಪ್ಪಂದ ಕುದುರಿಸಿ, ಪೆಟ್ರೋಲ್, ಡೀಸೆಲ್ ವಿತರಿಸುವ ಯಂತ್ರಗಳಲ್ಲಿ ಚಿಪ್ ಅಳವಡಿಸುತ್ತಿದ್ದ. ಹೀಗೆ ಮಾಡಿದ ಬಳಿಕ ಯಂತ್ರಗಳ ಮೀಟರ್‌ನಲ್ಲಿ ಯಾವುದೇ ವ್ಯತ್ಯಾಸ ಕಂಡುಬರದೇ ಇದ್ದರೂ, ೧ ಲೀಟರ್ ತೈಲ ವಿತರಿಸುವ ಬದಲು ಅದು 80 ಮಿ.ಲೀನಷ್ಟೇ ತೈಲ ವಿತರಿಸುತ್ತಿತ್ತು. ಮೀಟರ್ ಸರಿಯಾಗಿ ತೋರಿಸುವ ಕಾರಣ ಗ್ರಾಹಕರು ಅನುಮಾನ ಪಡುತ್ತಿರಲಿಲ್ಲ.

ಆದರೆ ಕೆಲವೆಡೆ ಈ ಬಗ್ಗೆ ಅನುಮಾನ ಬಂದು ತಪಾಸಣೆ ನಡೆಸಿದಾಗ ಈ ಗೋಲ್‌ಮಾಲ್ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದೆ ಮಹಾರಾಷ್ಟ್ರ ಪೊಲೀಸರು ಹಲವರನ್ನು ಬಂಧಿಸಿದ್ದರು. ಇದೀಗ ಅದೇ ಕಾರ್ಯಾಚರಣೆಯ ಮುಂದುವರೆದ ಭಾಗವಾಗಿ ಹುಬ್ಬಳ್ಳಿಯಲ್ಲಿ ಅವಿತುಕೊಂಡಿದ್ದ ಪ್ರಶಾಂತ್‌ನನ್ನು ಬಂಧಿಸಿದ್ದಾರೆ.