ಶಬ್ಬೀರ್'ಪುರ ಗ್ರಾಮದಲ್ಲಿ ರಜಫೂತ ದೊರೆ ಮಹಾರಾಣ ಪ್ರತಾಪ್ ಸ್ಮರಣಾರ್ಥವಾಗಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಜೋರಾಗಿ ಧ್ವನಿವರ್ಧಕಗಳನ್ನು ಬಳಸುವುದನ್ನು ದಲಿತರು ಆಕ್ಷೇಪಿಸಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಮಾರಾಮಾರಿಗೆ ತಲುಪಿದಾಗ ದಲಿತ ನಾಯಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಹರನ್'ಪುರ, ಉತ್ತರ ಪ್ರದೇಶ (ಮೇ. 06) : ಧ್ವನಿವರ್ಧಕದ ವಿಚಾರವಾಗಿ ಠಾಕೂರ್ ಸಮುದಾಯ ಹಾಗೂ ದಲಿತರ ನಡುವೆ ನಡೆದ ಹಿಂಸಾಚಾರದಲ್ಲಿ ಓರ್ವನು ಮೃತಪಟ್ಟು, 16 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸಹರನ್'ಪುರದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಯಲ್ಲಿ ದಲಿತರಿಗೆ ಸೇರಿದ 25 ಮನೆಗಳು ಬೆಂಕಿಗಾಹುತಿಯಾಗಿವೆ.
ಶಬ್ಬೀರ್'ಪುರ ಗ್ರಾಮದಲ್ಲಿ ರಜಫೂತ ದೊರೆ ಮಹಾರಾಣ ಪ್ರತಾಪ್ ಸ್ಮರಣಾರ್ಥವಾಗಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಜೋರಾಗಿ ಧ್ವನಿವರ್ಧಕಗಳನ್ನು ಬಳಸುವುದನ್ನು ದಲಿತರು ಆಕ್ಷೇಪಿಸಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಮಾರಾಮಾರಿಗೆ ತಲುಪಿದಾಗ ದಲಿತ ನಾಯಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೆರವಣಿಗೆ ನಡೆಸಲು ಠಾಕೂರರು ಅನುಮತಿಯನ್ನು ಪಡೆದಿರಲಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಮಧ್ಯಪ್ರವೇಶದಿಂದಲೂ ಪರಿಸ್ಥಿತಿ ಶಾಂತವಾಗದಿದ್ದಾಗ, ಮೆರವಣಿಗೆಯನ್ನು ಮುಂದುವರೆಸಲು ಪೊಲೀಸರು ಅವಕಾಶ ನೀಡಲಿಲ್ಲ. ಈ ಕುರಿತು ಪಕ್ಕದ ಗ್ರಾಮದಲ್ಲಿರುವ ಠಾಕೂರ್ ನಾಯಕರಿಗೆ ಸುದ್ದಿ ತಲುಪಿದಾಗ, ಸುಮಾರು 300 ಮಂದಿಯೊಂದಿಗೆ ಮಾರಕಾಸ್ತ್ರಗಳೊಂದಿಗೆ ತಲುಪಿದ್ದಾರೆ. ನೋಡುನೋಡುತ್ತಿದ್ದಂತೆ 2000 ಮಂದಿ ಠಾಕೂರರು ಶಬ್ಬೀರ್'ಪುರ ಗ್ರಾಮದಲ್ಲಿ ಜಮಾಯಿಸಿದ್ದಾರೆ. ಪೊಲೀಸರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರಿಂದ ಪರಿಸ್ಥಿತಿ ನಿಭಾಯಿಸಲು ವಿಫಲರಾಗಿದ್ದಾರೆಲ್ಲದೇ, ಗಲಭೆಕೋರರಿಂದ ದಾಳಿಗೊಳಗಾಗಿದ್ದಾರೆ, ಎಂದು ಪೊಲೀಸರು ಹೇಳಿದ್ದಾರೆ.
ಗಲಭೆಯಲ್ಲಿ 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 25 ದಲಿತರ ಮನೆಗಳನ್ನು ಸುಡಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಯಿಸಿ ಪರಿಸ್ಥಿಯನ್ನು ಹತೋಟಿಗೆ ತರಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ತಿಂಗಳುಗಳ ಹಿಂದೆಯೂ ದಲಿತರು ಹಾಗೂ ಠಾಕೂರರ ಮಧ್ಯೆ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸುವ ಬಗ್ಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.
(ಪಿಟಿಐ ಚಿತ್ರ)