ಬಾರಮುಲ್ಲ, ಜಮ್ಮು ಮತ್ತು ಕಾಶ್ಮೀರ(ಅ.2): ಭಾರತ ಸರ್ಜಿಕಲ್ ದಾಳಿ ನಡೆಸಿದ ತರುವಾಯು ಉಗ್ರರು ಮತ್ತೆ ತಮ್ಮ ಹಳೆಯ ಚಾಳಿ ಮುಂದುವರಿಸಿದ್ದು, ಬಾರಮುಲ್ಲ ಜಿಲ್ಲೆಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಪರಿಣಾಮ ಒಬ್ಬ ಯೋಧ ಹುತಾತ್ಮನಾಗಿದ್ದು, ನಾಲ್ವರು ಗಡಿ ಭದ್ರತಾ ಪಡೆಯ ಯೋಧರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ಸುಮಾರು 6 ಮಂದಿಯಿರುವ ಉಗ್ರರು ಭಾನುವಾರ ರಾತ್ರಿ 10.30ಕ್ಕೆ 46 ರಾಷ್ಟ್ರೀಯ ರೈಫಲ್ ಶಿಬಿರದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ತಕ್ಷಣ ಯೋಧರು ಸಹ ಉಗ್ರರತ್ತ ಗುಂಡಿನ ಮಳೆ ಸುರಿಸಿದ್ದಾರೆ. ಎರಡೂ ಕಡೆಯಿಂದ ಒಂದೂವರೆ ಗಂಟೆಯಿಂದ ಗುಂಡಿನ ದಾಳಿ ಮುಂದುವರಿದಿತ್ತು. ಮೂಲಗಳ ಪ್ರಕಾರ ಉಗ್ರರು ಸೇನಾ ಶಿಬಿರದ ಬಳಿ ಬಂದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.