ಭಾರತ ಹಾಗೂ ನೆರೆಯ ದೇಶ ಬಾಂಗ್ಲಾ ಮೇಲೆ ಉಗ್ರರ ದಾಳಿ ನಡೆಯಬಹುದು ಎಂದು ಐಬಿ ಎಚ್ಚರಿಕೆ ನೀಡಿದೆ.
ನವದೆಹಲಿ: ಭಾರತದಲ್ಲಿ ತಮ್ಮದೇ ಆದ ಪ್ರಾಂತ್ಯ ರಚಿಸಿಕೊಂಡಿರುವುದಾಗಿ ಐಸಿಸ್ ಉಗ್ರ ಸಂಘಟನೆ ಘೋಷಿಸಿಕೊಂಡ ಬೆನ್ನಲ್ಲೇ, ಪಶ್ಚಿಮ ಬಂಗಾಳ ಅಥವಾ ನೆರೆಯ ಬಾಂಗ್ಲಾದೇಶದಲ್ಲಿ ಐಸಿಸ್ ಅಥವಾ ಜಮಾತ್ ಉಲ್ ಮುಜಾಹಿದಿನ್ ಸಂಘಟನೆಯ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಕೇಂದ್ರೀಯ ಗುಪ್ತಚರ ದಳ(ಐಬಿ) ಎಚ್ಚರಿಕೆ ನೀಡಿದೆ.
ಬುದ್ಧ ಪೌರ್ಣಮಿಯಾದ ಭಾನುವಾರವೇ ಉಗ್ರರು, ನೆರೆಯ ಬಾಂಗ್ಲಾ ಅಥವಾ ಪಶ್ಚಿಮ ಬಂಗಾಳದ ಹಿಂದೂ ಅಥವಾ ಬುದ್ಧನ ದೇವಾಲಯಗಳಿಗೆ ಗರ್ಭಿಣಿಯ ಸೋಗಿನಲ್ಲಿ ಆಗಮಿಸಿ ದಾಳಿ ನಡೆಸಬಹುದಾಗಿದೆ ಎಂದು ಐಬಿ ಕಟ್ಟೆಚ್ಚರ ನೀಡಿದೆ. ಈ ಹಿನ್ನೆಲೆಯಲ್ಲಿ ಗುಪ್ತಚರದ ಎಚ್ಚರಿಕೆ ಸಂದೇಶವನ್ನು ಪಶ್ಚಿಮ ಬಂಗಾಳ ಹಾಗೂ ನೆರೆಯ ಬಾಂಗ್ಲಾ ಸರ್ಕಾರಕ್ಕೆ ರವಾನೆ ಮಾಡಿರುವ ಕೇಂದ್ರ ಸರ್ಕಾರ, ಯಾವುದೇ ದಾಳಿ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಎರಡು ವಾರದ ಹಿಂದೆ ಕೂಡಾ ಐಸಿಸ್ ಬೆಂಬಲಿತ ಸಂಘಟನೆಯೊಂದು ಅವಿಭಜಿತ ಬಾಂಗ್ಲಾ (ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ)ದಲ್ಲಿ ಉಗ್ರ ದಾಳಿ ನಡೆಸುವ ಬೆದರಿಕೆಯ ಸಂದೇಶ ರವಾನಿಸಿತ್ತು.
ಲಂಕಾದಲ್ಲಿ ಈಸ್ಟರ್ ಭಾನುವಾರ ದಾಳಿ ನಡೆಯುತ್ತದೆ ಎಂದು ಭಾರತ ಎಚ್ಚರಿಕೆ ನೀಡಿತ್ತು. ಆದರೆ, ಅದನ್ನು ಲಂಕಾ ನಿರ್ಲಕ್ಷ್ಯ ಮಾಡಿತ್ತು. ಈ ಪರಿಣಾಮ ಚರ್ಚ್ ಮತ್ತು ಐಷಾರಾಮಿ ಹೋಟೆಲ್‌ಗಳ ಮೇಲೆ ಐಸಿಸ್ ಉಗ್ರರು ಎಸಗಿದ ಆತ್ಮಾಹುತಿ ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
