ಬೆಂಗಳೂರು, [ಅ.01]: ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುದ್ದು ಹಾಜರಾಗಲು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ನೀಡಿದ್ದ ನೋಟಿಸ್‌ಗೆ  ಕರ್ನಾಟಕ ಹೈಕೋರ್ಟ್‌ 4 ವಾರ ವಿನಾಯಿತಿ ನೀಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಸಮನ್ಸ್‌ ರದ್ದು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಇಂದು [ಮಂಗಳವಾರ]  ವಿಚಾರಣೆ ನಡೆಸಿದ ನ್ಯಾ. ಪಿ.ಜಿ.ಎಂ. ಪಾಟೀಲ್‌ ಅವರಿದ್ದ ರಜಾ ಕಾಲದ ಏಕಸದಸ್ಯಪೀಠ, 4 ವಾರ  ಈ ವಿನಾಯಿತಿ ನೀಡಿ ವಿಚಾರಣೆಯನ್ನು ಅ. 14ಕ್ಕೆ ಮುಂದೂಡಿದೆ.

ಸಮನ್ಸ್‌ ರದ್ದು ಕೋರಿ ಎಚ್‌ಡಿಕೆ ಹೈಕೋರ್ಟ್‌ಗೆ

ಕುಮಾರಸ್ವಾಮಿ ಪರ ವಕೀಲರ ಹಷ್ಮತ್‌ ಪಾಷಾ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ವಿಚಾರಣೆಗೆ ತಡೆ ನೀಡುವಂತೆ ಹೈಕೋರ್ಟ್ ಗೆ ಕೋರಿದರು. ಆದರೆ, ಇದನ್ನು ನಿರಾಕರಿಸಿದ ನ್ಯಾಯಪೀಠ, ತಡೆ ಬೇಕಿದ್ದರೆ ರಜಾ ಕಾಲದ ನಂತರ 'ನಿಯಮಿತ ಪೀಠ'ದಲ್ಲಿ ಕೇಳಿಕೊಳ್ಳಿ. ಸದ್ಯಕ್ಕೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೊಡಬಹುದಷ್ಟೇ' ಎಂದು ಹೇಳಿ ಆದೇಶ ನೀಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕುಮಾರಸ್ವಾಮಿಯವರಿಗೆ ಪ್ರಕರಣ ಸಂಬಂಧ ಅ. 4ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿತ್ತು. ಇದೀಗ ಹೈಕೋರ್ಟ್‌ ಆದೇಶದಿಂದ ಎಚ್‌ಡಿಕೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

ಎಂ.ಎಸ್. ಮಹದೇವಸ್ವಾಮಿ ಎನ್ನುವರು ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದರು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ ಕುಮಾರಸ್ವಾಮಿ ಅವರು ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿಯಲ್ಲಿ ಬಿಡಿಎ ಬಡಾವಣೆಗಾಗಿ ವಶಪಡಿಸಿಕೊಂಡಿದ್ದ 3 ಎಕರೆ 34 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆ ದೂರಿನಲ್ಲಿ ಆರೋಪಿಸಲಾಗಿದೆ.