ಬೆಂಗಳೂರು (ಸೆ. 20): ಬನಶಂಕರಿ 5ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಬಿಡಿಎ ವಶಪಡಿಸಿಕೊಂಡಿದ್ದ ಹಲಗೆವಡೇರಹಳ್ಳಿಯಲ್ಲಿನ 3 ಎಕರೆ 34 ಗುಂಟೆ ಜಮೀನಿನ ಅಕ್ರಮ ಡಿ-ನೋಟಿಫಿಕೇಷನ್‌ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಹಾಜರಾಗಲು ಸೂಚಿಸಿ ತಮ್ಮ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ಸಮನ್ಸ್‌ ರದ್ದು ಪಡಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!

ವಿಶೇಷ ನ್ಯಾಯಾಲಯದ ಸಮನ್ಸ್‌ ಮತ್ತದರ ವಿಚಾರಣೆ ರದ್ದುಪಡಿಸುವಂತೆ ಕುಮಾರಸ್ವಾಮಿ ಅರ್ಜಿಯಲ್ಲಿ ಕೋರಿದ್ದಾರೆ. ಲೋಕಾಯುಕ್ತ ಪೊಲೀಸರು ಹಾಗೂ ದೂರುದಾರ ಎಂ.ಎಸ್‌. ಮಹದೇವಸ್ವಾಮಿ ಅವರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗಿದೆ. ಅರ್ಜಿಯು ಸೆ.23 ರಂದು ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಆರ್‌ಟಿಐ ಕಾರ್ಯಕರ್ತ ಎಂ.ಎಸ್‌. ಮಹದೇವಸ್ವಾಮಿ 2012ರಲ್ಲಿ ಲೋಕಾಯುಕ್ತಕ್ಕೆ ಖಾಸಗಿ ದೂರು ದಾಖಲಿಸಿದ್ದರು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ ಕುಮಾರಸ್ವಾಮಿ ಅವರು ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿಯಲ್ಲಿ ಬಿಡಿಎ ಬಡಾವಣೆಗಾಗಿ ವಶಪಡಿಸಿಕೊಂಡಿದ್ದ 3 ಎಕರೆ 34 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆ ದೂರಿನಲ್ಲಿ ಆರೋಪಿಸಲಾಗಿತ್ತು.

ಲೋಕಾಯುಕ್ತ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ಏಳು ವರ್ಷ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು, 2019ರ ಜನವರಿ ತಿಂಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು.

ಹುಬ್ಬಳ್ಳಿಯಲ್ಲಿ ಪೊಲೀಸ್‌ ಇಲಾಖೆಯಿಂದ ಸ್ಪೆಷಲ್ ಡ್ರೈವ್‌

ಅದನ್ನು ಆಕ್ಷೇಪಿಸಿ ದೂರುದಾರ ಮಹದೇವಸ್ವಾಮಿ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯ, ಬಿ-ರಿಪೋರ್ಟ್‌ ರದ್ದುಪಡಿಸಿತ್ತು. ಅಲ್ಲದೆ, ಅ.4ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಪ್ರಕರಣದ ಒಟ್ಟು 19 ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿತ್ತು.