ಬೆಂಗಳೂರು :  ‘ಫೋನಿ’ ಚಂಡಮಾರುತ ಹಾಗೂ ಮೇಲ್ಮೈ ಸುಳಿಯ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಸದ್ಯ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳಿಲ್ಲ. ಆದರೆ, ಒಂದೆರಡು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಏರಿಕೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಚಂಡಮಾರುತದಿಂದ ರಾಜ್ಯದ ಮೇಲೆ ಅಷ್ಟೊಂದು ಪರಿಣಾಮವಾಗಿಲ್ಲ. ಇನ್ನು ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿದ್ದ ಮಳೆ ಪ್ರಭಾವವೂ ಕಡಿಮೆಯಾಗಿದೆ. ಮುಂದಿನ ಮೂರರಿಂದ ನಾಲ್ಕು ದಿನ ರಾಜ್ಯದಲ್ಲಿ ಮಳೆ ಆಗುವ ಲಕ್ಷಣಗಳಿಲ್ಲ. ಹೀಗಾಗಿ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟುಹೆಚ್ಚಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಬಿಸಿಗಾಳಿ ಕಡಿಮೆ:

ಶುಭ್ರಾಕಾಶದಿಂದ ಉಷ್ಣಾಂಶದ ಪ್ರಮಾಣ ಹೆಚ್ಚಾದರೂ ಬಿಸಿ ಗಾಳಿ ಬೀಸುವುದಿಲ್ಲ. ಕಾರಣ, ಕಳೆದ ಒಂದು ವಾರದಿಂದ ದಕ್ಷಿಣ ಭಾರತದಲ್ಲಿ ಚಂಡಮಾರುತದಿಂದ ವ್ಯಾಪಕವಾಗಿ ಮಳೆ ಆಗಿದೆ ಮತ್ತು ವಾತಾವರಣದಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ, ಬಿಸಿಗಾಳಿ ಬೀಸುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.