ಹೈದರಾಬಾದ್‌[ಏ.30]: ತೆಲಂಗಾಣದ ಇಂಟರ್‌ಮೀಡಿಯಟ್‌ (12ನೇ ತರಗತಿ) ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಕಳೆದ 10 ದಿನಗಳಲ್ಲಿ 25 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಮೌಲ್ಯಮಾಪನ ಎಡವಟ್ಟೊಂದು ಬೆಳಕಿಗೆ ಬಂದಿದೆ.

ತೆಲುಗು ಭಾಷೆ ಪರೀಕ್ಷೆಯಲ್ಲಿ 99 ಅಂಕ ಗಳಿಸಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೌಲ್ಯಮಾಪಕಿ ಶೂನ್ಯ ಅಂಕ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಲೋಪದ ಬಗ್ಗೆ ಮತ್ತೊಬ್ಬ ಮೌಲ್ಯಮಾಪಕ ಪರಿಶೀಲನೆ ನಡೆಸಬೇಕಿತ್ತು. ಆದರೆ ಆತ ಕೂಡ ನಿರ್ಲಕ್ಷ್ಯ ತೋರಿದ್ದಾನೆ.

ಈ ಹಿನ್ನೆಲೆಯಲ್ಲಿ ಇಬ್ಬರೂ ಮೌಲ್ಯಮಾಪಕರನ್ನು ಅಮಾನತುಗೊಳಿಸಿದೆ. ಶೂನ್ಯ ನೀಡಿದ ಶಿಕ್ಷಕಿಗೆ 5 ಸಾವಿರ ರು. ದಂಡ ವಿಧಿಸಲಾಗಿದೆ.