ತಮ್ಮ ಭಾರತೀಯ ಪೌರತ್ವವನ್ನು ಗೃಹ ಸಚಿವಾಲಯ ರದ್ದುಪಡಿಸಿರುವುದನ್ನು ಸ್ವತಃ ರಮೇಶ್ ಖಚಿತಪಡಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು ತಮಗೆ 30 ದಿನ ಸಮಯಾವಕಾಶವೂ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.
ತೆಲಂಗಾಣ(ಸೆ.07): ಜರ್ಮನಿಯ ಪೌರತ್ವ ಪಡೆದಿರುವ ವ್ಯಕ್ತಿಯೊಬ್ಬರು ತೆಲಂಗಾಣದ ಶಾಸಕರಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ‘ಜರ್ಮನಿ ಪ್ರಜೆ’ಯ ಭಾರತೀಯ ಪೌರತ್ವವನ್ನು ಕೇಂದ್ರ ಗೃಹ ಸಚಿವಾಲಯ ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಯಿಂದ ಆಯ್ಕೆಯಾಗಿರುವ ಈ ಶಾಸಕ ಅನರ್ಹತೆಯ ಅಪಾಯಕ್ಕೆ ಸಿಲುಕಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಸಿ.ಎಚ್. ವಿದ್ಯಾಸಾಗರ ರಾವ್ ಅವರ ಬಂಧುವಾಗಿರುವ ಚೆನ್ನಮನೇನಿ ರಮೇಶ್ ಎಂಬುವರೇ ಪೌರತ್ವ ಕಳೆದುಕೊಂಡು ಸದಸ್ಯತ್ವ ರದ್ದತಿ ಭೀತಿಗೆ ಗುರಿಯಾದವರು. ಜರ್ಮನಿಯ ಪೌರತ್ವ ಹೊಂದಿರುವ ರಮೇಶ್ ಅವರು 2009ರಲ್ಲಿ ಭಾರತೀಯ ಪೌರತ್ವವನ್ನೂ ಪಡೆದಿದ್ದರು. ಆ ವೇಳೆ, ನಿಗದಿತ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣವನ್ನು ನೀಡಿ ಗೃಹ ಸಚಿವಾಲಯ ಅವರ ಭಾರತೀಯ ಪೌರತ್ವ ರದ್ದುಗೊಳಿಸಿದೆ. ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ವೇಮುಲವಾಡಾ ವಿಧಾನಸಭಾ ಕ್ಷೇತ್ರದಿಂದ ರಮೇಶ್ ಆಯ್ಕೆಯಾಗಿದ್ದಾರೆ. ಅವರ ತಂದೆ ಸಿ.ಎಚ್. ರಾಜೇಶ್ವರರಾವ್ ಕಮ್ಯುನಿಸ್ಟ್ ನಾಯಕರಾಗಿದ್ದು, 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ತೆಲುಗುದೇಶಂಗೆ ಪಕ್ಷಾಂತರಗೊಂಡಿದ್ದರು.
ತಮ್ಮ ಭಾರತೀಯ ಪೌರತ್ವವನ್ನು ಗೃಹ ಸಚಿವಾಲಯ ರದ್ದುಪಡಿಸಿರುವುದನ್ನು ಸ್ವತಃ ರಮೇಶ್ ಖಚಿತಪಡಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು ತಮಗೆ 30 ದಿನ ಸಮಯಾವಕಾಶವೂ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಭಾರತೀಯ ಪೌರತ್ವ ಪಡೆಯಲು ಜರ್ಮನಿ ಸದಸ್ಯತ್ವವನ್ನು ರದ್ದುಪಡಿಸಿದ್ದೆ. ಭಾರತದಲ್ಲಾಗಲೀ, ಜರ್ಮನಿಯಲ್ಲಾಗಲೀ ಎರಡು ದೇಶಗಳ ಪೌರತ್ವ ಪಡೆಯುವ ಅವಕಾಶವಿಲ್ಲ. ಈಗ ಪೌರತ್ವ ರದ್ದಾಗಿರುವುದರಿಂದ ನಾನು ಎಲ್ಲಿ ಹೋಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ರಮೇಶ್ ವಿರುದ್ಧ ಕಾಂಗ್ರೆಸ್ ಪಕ್ಷದ ಶ್ರೀನಿವಾಸ್ ಎಂಬುವರು ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಹೈದರಾಬಾದ್ ಹೈಕೋರ್ಟ್ ಮೊರೆ ಹೋಗಿದ್ದ ಅವರು, ರಮೇಶ್ ಜರ್ಮನಿ ಪ್ರಜೆ ಯಾಗಿರುವ ಕಾರಣ ಅವರ ಶಾಸಕತ್ವ ಅನರ್ಹ ಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ರಮೇಶ್ ಸದಸ್ಯತ್ವವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಅದರ ವಿರುದ್ಧ ಸುಪ್ರೀಂನಲ್ಲಿ ರಮೇಶ್ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ನ್ಯಾಯಾಲಯ ಸೂಚಿಸಿತ್ತು.
