ಬೆಂಗಳೂರು :  ಚಲಿಸುತ್ತಿದ್ದ ರೈಲಿನ ಎಂಜಿನ್‌ನಲ್ಲಿ ದಿಢೀರ್‌ ದಟ್ಟಹೊಗೆ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಹೂಡಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಜರುಗಿತು. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.

ಕೋಲಾರದ ಬಂಗಾರಪೇಟೆಯಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ರೈಲು ಸಂಜೆ 5.30ರ ಸುಮಾರಿಗೆ ಹೂಡಿ ರೈಲ್ವೆ ನಿಲ್ದಾಣದ ಸಮೀಪ ಬಂದಾಗ ಎಂಜಿನ್‌ನಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ರೈಲು ಚಾಲಕ ರೈಲಿನ ವೇಗ ನಿಯಂತ್ರಿಸಿ ಹೂಡಿ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ್ದಾರೆ. ಅಷ್ಟರಲ್ಲಿ ರೈಲ್ವೆ ನಿಲ್ದಾಣದ ಸಿಬ್ಬಂದಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೊಗೆ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಜಿನ್‌ನಲ್ಲಿ ದಟ್ಟಹೊಗೆ ಕಾಣಿಸಿಕೊಂಡ ಪರಿಣಾಮ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ವಿಳಂಬವಾಯಿತು. ನಂತರ ರೈಲು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತಲುಪಿತು. ತಾಂತ್ರಿಕದೋಷದಿಂದ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಹಿರಿಯ ಅಧಿಕಾರಿ ಶ್ರೀಧರ್‌ಮೂರ್ತಿ ತಿಳಿಸಿದರು.