ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ವ್ಯಕ್ತಿಯೊಬ್ಬರು ನಗರದ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು (ಜ.07): ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ವ್ಯಕ್ತಿಯೊಬ್ಬರು ನಗರದ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಲ್ಯಾಣ ನಗರ ನಿವಾಸಿ ಜೇಕಬ್ ವೆಯೋ (27) ಮೃತರು. ಜ.3ರಂದು ತಡರಾತ್ರಿ ಘಟನೆ ನಡೆದಿದೆ. ಜೇಕಬ್ ಕುಟುಂಬ ಕಲ್ಯಾಣ ನಗರದಲ್ಲಿ ವಾಸವಿದೆ.

ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಜೇಕಬ್ ವಿವಾಹಿತರಾಗಿದ್ದು, ಅಮೆರಿಕದಲ್ಲಿ ಉದ್ಯೋಗದಲ್ಲಿದ್ದರು. ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಕುಟುಂಬ ಜತೆ ಹಬ್ಬ ಆಚರಿಸಲು ಜೇಕಬ್ ರಜೆ ಪಡೆದು ಡಿಸೆಂಬರ್ ತಿಂಗಳಲಿನಲ್ಲಿ ನಗರಕ್ಕೆ ಬಂದಿದ್ದರು. ಕುಟುಂಬ ಸಮೇತ ಕ್ರಿಸ್ಮಸ್ ಆಚರಿಸಿದ್ದ ಜೇಕಬ್ ಡಿ.3ರಂದು ಅಮೆರಿಕಕ್ಕೆ ವಾಪಸ್ ತೆರಳಬೇಕಿತ್ತು.

ಜೇಕಬ್ ತಾಯಿ ಮತ್ತು ಕುಟುಂಬಸ್ಥರು ಡಿ.3ರಂದು ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹೋಗಿ ಜೇಕಬ್’ನನ್ನು ಬಿಟ್ಟು ಬಂದಿದ್ದರು. ಪೋಷಕರು ಮನೆಗೆ ತೆರಳುತ್ತಿದ್ದಂತೆ ವಿಮಾನ ನಿಲ್ದಾಣದಿಂದ ಹೊರ ಬಂದಿರುವ ಜೇಕಬ್ ಚಿಕ್ಕಜಾಲಕ್ಕೆ ಬಂದು ತಡರಾತ್ರಿ ‘ಹೌಸ್ ಪಿಂಚ್’ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಮರು ದಿನ ಜೇಕಬ್ ಲಾಡ್ಜ್‌ನ ಕೊಠಡಿಯಿಂದ ಹೊರ ಬಂದಿಲ್ಲ. ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಅವರ ಮೊಬೈಲ್‌ಗೆ ಕರೆ ಮಾಡಿದ್ದು, ಸ್ವಿಚ್ ಆಫ್ ಎಂದು ಬಂದಿದೆ. ಬಳಿಕ ಲಾಡ್ಜ್‌ನ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.