ಅಮೆರಿಕದ ಬಂದೂಕು ಸಂಸ್ಕೃತಿ ಅದೆಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಾಗುತ್ತಿಲ್ಲ. ದಿನ ಬೆಳಗಾದರೆ ಅಮೆರಿಕದ ಗಲ್ಲಿಗಳಲ್ಲಿ ಗುಂಡಿನ ಸದ್ದು ಮಾಡುತ್ತಲೇ ಇರುತ್ತದೆ. ಈ ಬಂದೂಕು ಸಂಸ್ಕೃತಿಗೆ ಜನಾಂಗೀಯ ದ್ವೇಷ, ಯುವಕರಲ್ಲಿ ಹೆಚ್ಚುತ್ತಿರುವ ಹಿಂಸಾ ಪ್ರವೃತ್ತಿ ಹಾಗೂ ಮಾನಸಿಕ ಒತ್ತಡಗಳಂತ ಹಲವು ಆಯಾಮಗಳಿರುವುದೂ ಅಷ್ಟೇ ಸತ್ಯ.

ಟೆಕ್ಸಾಸ್ (ಮೇ. 26): ಅಮೆರಿಕದ ಬಂದೂಕು ಸಂಸ್ಕೃತಿ ಅದೆಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಾಗುತ್ತಿಲ್ಲ. ದಿನ ಬೆಳಗಾದರೆ ಅಮೆರಿಕದ ಗಲ್ಲಿಗಳಲ್ಲಿ ಗುಂಡಿನ ಸದ್ದು ಮಾಡುತ್ತಲೇ ಇರುತ್ತದೆ. ಈ ಬಂದೂಕು ಸಂಸ್ಕೃತಿಗೆ ಜನಾಂಗೀಯ ದ್ವೇಷ, ಯುವಕರಲ್ಲಿ ಹೆಚ್ಚುತ್ತಿರುವ ಹಿಂಸಾ ಪ್ರವೃತ್ತಿ ಹಾಗೂ ಮಾನಸಿಕ ಒತ್ತಡಗಳಂತ ಹಲವು ಆಯಾಮಗಳಿರುವುದೂ ಅಷ್ಟೇ ಸತ್ಯ.

ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಇಂತಹ ಶೂಟೌಟ್ ಇತ್ತಿಚೀನ ದಿನಗಳಲ್ಲಿ ಹೆಚ್ಚುತ್ತಿದೆ. ಟೆಕ್ಸಾಸ್ಸ್‌ನ ಇಂಡಿಯಾನಾ ಮಿಡಲ್ ಸ್ಕೂಲ್ ನಲ್ಲೂ ಇಂತದ್ದೇ ಘಟನೆ ನಡೆದಿದ್ದು, ಶಾಲಾ ಆವರಣದಲ್ಲಿ ಮನಬಂದಂತೆ ಗುಂಡು ಹಾರಿಸುತ್ತಿದ್ದ ವಿದ್ಯಾರ್ಥಿಯನ್ನು ಶಿಕ್ಷಕನೋರ್ವ ತಡೆ ಹಿಡಿದ ಘಟನೆ ನಡೆದಿದೆ. ಜೇಸನ್ ಸಿಮ್ಯಾನ್ ಎಂಬ ವಿಜ್ಞಾನ ಶಿಕ್ಷಕ ಗುಂಡು ಹಾರಿಸುತ್ತಿದ್ದ ವಿದ್ಯಾರ್ಥಿಯತ್ತ ಮುನ್ನುಗ್ಗಿ ಆತನನ್ನು ನೆಲಕ್ಕೆ ಕೆಡವಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.

ವಿಶ್ರಾಂತಿ ಸಮಯದಲ್ಲಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೊರ ಹೋದ ವಿದ್ಯಾರ್ಥಿ, ಬಂದೂಕು ಸಮೇತ ಶಾಲಾ ಆವರಣಕ್ಕೆ ನುಗ್ಗಿ ಗುಂಡು ಹಾರಿಸತೊಡಗಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವೇಳೆ ಜೇಸನ್ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದು, ತಮ್ಮ ಪ್ರಾಣದ ಹಂಗು ತೊರೆದು ವಿದ್ಯಾರ್ಥಿನಿಯೋರ್ವಳನ್ನು ರಕ್ಷಿಸಿದ್ದಾರೆ. ಶಿಕ್ಷಕ ಸಹಾಯಕ್ಕೆ ಬರದಿದ್ದರೆ ಮತ್ತಷ್ಟು ಮಕ್ಕಳು ಅಪಾಯದಲ್ಲಿ ಸಿಲುಕಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಜೇಸನ್ ಅವರ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.