Asianet Suvarna News Asianet Suvarna News

ಸಾರ್ವಜನಿಕ ಸಮಾರಂಭದಲ್ಲಿ ತನ್ವೀರ್ ಸೇಠ್-ಪುಟ್ಟಣ್ಣ ಜಟಾಪಟಿ

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ವರ್ತನೆ ಹಾಗೂ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಕುರಿತಂತೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತೀವ್ರ ವಾಗ್ದಾಳಿ ನಡೆಸಿದ್ದರಿಂದ ಸಾರ್ವಜನಿಕ ಸಮಾರಂಭದಲ್ಲೇ ಶಿಕ್ಷಣ ಸಚಿವ ತನ್ವೀರ್ ಸೇಠ್ ಜತೆ ಪರಸ್ಪರ ವಾಗ್ವಾದ ಉಂಟಾದ ಘಟನೆ ಸೋಮವಾರ ನಡೆಯಿತು.

Tanvir Sait And MLC Puttanna Quarrel Infront Of Public Function

ಬೆಂಗಳೂರು (ಜ.30): ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ವರ್ತನೆ ಹಾಗೂ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಕುರಿತಂತೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತೀವ್ರ ವಾಗ್ದಾಳಿ ನಡೆಸಿದ್ದರಿಂದ ಸಾರ್ವಜನಿಕ ಸಮಾರಂಭದಲ್ಲೇ ಶಿಕ್ಷಣ ಸಚಿವ ತನ್ವೀರ್ ಸೇಠ್ ಜತೆ ಪರಸ್ಪರ ವಾಗ್ವಾದ ಉಂಟಾದ ಘಟನೆ ಸೋಮವಾರ ನಡೆಯಿತು.

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಪುಟ್ಟಣ್ಣ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಬಹಿರಂಗವಾಗಿಯೇ ತೀವ್ರ ವಾಗ್ದಾಳಿ ನಡೆಸಿದ್ದುದು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಕೋಪಕ್ಕೆ ಕಾರಣವಾಯಿತು. 

‘ಅಯೋಗ್ಯ ಅಧಿಕಾರಿಗಳನ್ನು ಇಟ್ಟುಕೊಂಡರೆ ಯಾವ ಇಲಾಖೆಯೂ ಉದ್ಧಾರ ಆಗಲ್ಲ. ಮೊದಲು ಇಲಾಖೆಯ ಪ್ರಧಾನ  ಕಾರ್ಯದರ್ಶಿ ಅಜಯ್ ಸೇಠ್ ಅವರನ್ನು ತೆಗೆದು ಹಾಕಿ. ಇಲ್ಲದಿದ್ದರೆ ಬ್ರಹ್ಮ ಬಂದರೂ ಶಿಕ್ಷಣ ಇಲಾಖೆಯನ್ನು ಸರಿ ಮಾಡಲು ಸಾಧ್ಯವಿಲ್ಲ. ಒಂದು ಕೆಲಸಕ್ಕೆ ಹತ್ತು ಬಾರಿ ಅವರ ಬಳಿ ಹೋಗಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಮುಳುಗಿಸುವ ಕೆಲಸಕ್ಕೆ ಸೇಠ್ ಮುಂದಾಗಿದ್ದಾರೆ. ಐಎಎಸ್ ಅಧಿಕಾರಿಗಳಿಂದಲೇ ದೇಶ ಹಾಳಾಗುತ್ತಿದೆ’ ಎಂದು ಶಾಸಕ ಪುಟ್ಟಣ್ಣ ಅವರು ಸಚಿವ ಸೇಠ್ ಎದುರು ದೂರಿದರು.

ಇಷ್ಟಕ್ಕೆ ಸುಮ್ಮನಾಗದ ಶಾಸಕ ಪುಟ್ಟಣ್ಣ, ‘‘ಡಿಡಿಪಿಐ ಹಾಗೂ ಬಿಇಓಗಳು ಶಿಕ್ಷಕರಿಂದಲೇ ಹಣ ವಸೂಲಿ ಮಾಡುತ್ತಿದ್ದಾರೆ. ಮೊದಲು ಅವರ ಮೇಲೆ ಕ್ರಮಕೈಗೊಳ್ಳಿ. ಈ ಅಮಾಯಕ ಶಿಕ್ಷಕರ ಮೇಲೇಕೆ ಶಿಸ್ತು ಕ್ರಮಕೈಗೊಳ್ಳುತ್ತಿರಿ’’ ಎಂದರಲ್ಲದೇ ಮಾತಿನ ಭರದಲ್ಲಿ ‘ಯಾಕೆ ಸ್ವಾಮಿ, ಮಂತ್ಲಿ ಮಾಮೂಲಿ ಕೊಡ್ತಾರೆ ಅಂತನಾ’ ಎಂದುಬಿಟ್ಟರು.

ಆಗ ಕೋಪಗೊಂಡ ಸಚಿವ ಸೇಠ್, ಪುಟ್ಟಣ್ಣ ಅವರ ಕೈಯಲ್ಲಿದ್ದ ಮೈಕ್ ಕಿತ್ತುಕೊಂಡು, ‘‘ಪುಟ್ಟಣ್ಣ, ಹಣದ ವಿಚಾರ ಇಲ್ಲೇಕೆ ಮಾತನಾಡುತ್ತಿದ್ದೀರಿ? ಯಾರೂ ನನಗೆ ಹಣ ಕೊಡುವುದಿಲ್ಲ. ಮಾಧ್ಯಮದವರು ಮುಂದಿದ್ದಾರೆ ಎಂದು ಹಾಗೆಲ್ಲ ಮಾತನಾಡುವುದು ಸರಿಯಲ್ಲ. ಎಲ್ಲಿ ಯಾವುದನ್ನು ಮಾತನಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಿ. ಈ ರೀತಿ ಯಾರು ಬೇಕಾದರೂ ಯಾರ ವಿರುದ್ಧವಾದರೂ ಆರೋಪ ಮಾಡಬಹುದು. ನೀವು ಒಬ್ಬ ಶಾಸಕ ಎನ್ನುವುದನ್ನು ಮರೆಯಬೇಡಿ’’ ಎಂದು ತಿರುಗೇಟು ನೀಡಿದರು.

ಯಾವುದೇ ವ್ಯವಸ್ಥೆಯನ್ನು ತಕ್ಷಣ ಬದಲಾಯಿಸಲು ಸಾಧ್ಯವಿಲ್ಲ. ಸರ್ಕಾರದ ಪ್ರತಿನಿಧಿಯಾಗಿ ನನಗೂ ಸಾಕಷ್ಟು ಕಟ್ಟುಪಾಡುಗಳಿವೆ. ಗಂಗಾವತಿಯಲ್ಲಿ ಹಣ ಪಡೆಯುತ್ತಿದ್ದ ೧೮೦ ಅಧಿಕಾರಿಗಳನ್ನು ಅಮಾನತು ಮಾಡಿದ್ದೇನೆ. ಬೇಕಿದ್ದರೆ ಸಮಸ್ಯೆಗಳ ಬಗ್ಗೆಯೇ ಸಂವಾದ ಏರ್ಪಡಿಸಿ, ಅಲ್ಲಿ ಎಲ್ಲವನ್ನು ಮಾತನಾಡೋಣ ಎಂದು ಪುಟ್ಟಣ್ಣ ವಿರುದ್ಧ ಸೇಠ್ ಹರಿಹಾಯ್ದರು.

ಇದಕ್ಕೆ  ಮತ್ತೆ ಪ್ರತಿಕ್ರಿಯಿಸಿದ ಪುಟ್ಟಣ್ಣ, ‘‘ನೀವು ಹಣ ಪಡೆಯುತ್ತೀರಿ ಎಂದು ನಾನು ಹೇಳಲಿಲ್ಲ. ಕೋಪ ಮಾಡಿಕೊಳ್ಳಬೇಡಿ. ತಾಳ್ಮೆಯಿಂದ ಎಲ್ಲವನ್ನು ಪರಿಶೀಲಿಸಿ. ಆರ್‌ಟಿಇ ಕಾಯ್ದೆಯಲ್ಲಿ ಡಿಡಿಪಿಐ ಹಾಗೂ ಬಿಇಓಗಳು ಹಣ ಸುಲಿಗೆ ಮಾಡುತ್ತಿದ್ದಾರೆ. ಇದಲ್ಲದೆ ಶಿಕ್ಷಕರ ವರ್ಗಾವಣೆಗೆ, ನೇಮಕಾತಿಗೆ ಹಣ ಕೇಳುತ್ತಿದ್ದಾರೆ. ಆರ್‌ಟಿಇನಲ್ಲಿ ಮಕ್ಕಳಿಗೆ ಮೀಸಲಿಟ್ಟ ಹಣ ಡಿಡಿಪಿಐಗಳ ಜೇಬಿಗೆ ಸೇರುತ್ತಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಸಿ’’ ಎಂದು ಒತ್ತಾಯಿಸಿದರು.

ನಿಮಗೂ ಸನ್ಮಾನ!

ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿದ್ದಾರೆ. ಡಿಡಿಪಿಐ ಹಾಗೂ ಬಿಇಓಗಳು ಶಿಫಾರಸು ಮಾಡಿದ ಶಿಕ್ಷಕರನ್ನು ನೇಮಕ ಮಾಡಬಾರದು ಎಂಬ ನಿಯಮ ತಂದಿದ್ದರು. ಆದರೆ, ಇದಕ್ಕೆ ಅಜಯ್ ಸೇಠ್ ಅಡ್ಡಗಾಲು ಹಾಕಿದರು. ಹಾಗಾಗಿ ಇಂದು ಕಿಮ್ಮನೆ ರತ್ನಾಕರ ಅವರನ್ನು ಸಂಘ ಆತ್ಮೀಯವಾಗಿ ಸನ್ಮಾನಿಸುತ್ತಿದೆ. ನೀವು ಭ್ರಷ್ಟಾಚಾರ ಮುಕ್ತ ಕೆಲಸ ಮಾಡಿ, ಆಗ ನಿಮಗೂ ಸನ್ಮಾನ ಮಾಡುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘‘ಅಂದರೆ ನಾನು ಕೂಡ ಮಾಜಿ ಸಚಿವ ಆಗಬೇಕೆಂದು ಬಯಸುತ್ತೀರಾ?’’ ಎಂದು ಸಚಿವ ಸೇಠ್ ಚಟಾಕಿ ಹಾರಿಸಿದರು.

ಪಠ್ಯಕ್ರಮ ಪರಿಷ್ಕರಣೆ ಸರಿಯಲ್ಲ

ಪಠ್ಯಕ್ರಮ ಪರಿಷ್ಕರಣೆ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುವ ಬದಲು ಶಿಕ್ಷಕರಿಗೆ ಜವಾಬ್ದಾರಿ ನೀಡಿ, ಅವರು ತೀರ್ಮಾನ ಮಾಡುತ್ತಾರೆ. ಭವಿಷ್ಯದ ಪ್ರಜೆಗಳನ್ನು ಆಯ್ಕೆ ಮಾಡುವವರು ಶಿಕ್ಷಕರು. ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ. ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಉತ್ತಮ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿ. ಆಗ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಪುಟ್ಟಣ್ಣ ಹೇಳಿದರು.

 

Follow Us:
Download App:
  • android
  • ios