ಕುಡಿಯುವ ನೀರಿನ ಅಭಾವದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಟ್ಯಾಂಕರ್‌ ಮಾಲೀಕರು ನೀರಿನ ದರವನ್ನು ಏಕಾಏಕಿ ಏರಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಟ್ಯಾಂಕರ್‌ ನೀರಿನ ದರ ಶೇ 30ರಿಂದ 40ರಷ್ಟು ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಬಿಬಿಎಂಪಿ  ಮಾತ್ರ ಮೌನಕ್ಕೆ ಶರಣಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊದಲೇ ಕುಡಿಯೋ ನೀರಿಗೆ ಬರ.. ಇದರ ಮಧ್ಯೆ ಬಿಸಿಲ ಬೇಗೆಯಿಂದ ಹೆಚ್ಚಾದ ನೀರಿನ ಬೇಡಿಕೆ.. ಜನವರಿ ಪೆಬ್ರವರಿ ತಿಂಗಳಿಗೆ ಹೋಲಿಸಿದ್ರೆ ನೀರಿನ ಬೇಡಿಕೆ ಶೇ 30ರಷ್ಟು ಹೆಚ್ಚಾಗಿದೆ.. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಟ್ಯಾಂಕರ್ ಮಾಲೀಕರು ನೀರಿನ ದರವನ್ನು ಏಕಾಏಕಿ ಏರಿಸಿದ್ದಾರೆ. ನೀರಿನ ದರ ಶೇ 30ರಿಂದ 40ರಷ್ಟು ಹೆಚ್ಚಾಗಿದೆ. 5 ರಿಂದ 6 ಸಾವಿರ ಲೀಟರ್ ನೀರಿಗೆ 500ರೂಪಾಯಿಗಿಂತಲು ಹೆಚ್ಚು ನಿಗದಿಯಾದ್ರೆ, ವೈಟ್‌'ಫೀಲ್ಡ್, ಸರ್ಜಾಪುರ, ಕೆ.ಆರ್‌.ಪುರ ಕಡೆಗಳಲ್ಲಿ 1000 ರೂಪಾಯಿ ಫಿಕ್ಸ್ ಮಾಡಲಾಗಿದೆ ಎನ್ನುತ್ತಾರೆ ಟ್ಯಾಂಕರ್ ಚಾಲಕರು.

ನಗರದ ಕೆಲ ಭಾಗದ ಜನರಿಗೆ ಎರಡು ದಿನಕ್ಕೊಮ್ಮೆ ಕಾವೇರಿ ನೀರು ಸಿಗುತ್ತಿದೆ. ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ವಾರ್ಡ್‌'ಗಳಲ್ಲಿ ಇನ್ನೂ ಪೈಪ್‌'ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿಲ್ಲ.. ಇನ್ನೂ ಕೆಲವೆಡೆ ಜಲಮಂಡಳಿ ಪೈಪ್'​ಲೈನ್ ಸರಿಯಾಗಿ ಅಳವಡಿಸಿಲ್ಲ.. ಇಂಥ ಏರಿಯಾದಲ್ಲೆಲ್ಲ ಟ್ಯಾಂಕರ್ ನೀರೇ ಆಧಾರ.. ಆದ್ರೀಗ ಬೆಲೆ ಏರಿಸಿದ್ದು ಭಾರೀ ಶಾಕ್ ನೀಡಿದೆ.

ಕೊಳವೆಬಾವಿಯಿಂದ ಟ್ಯಾಂಕರ್‌'ಗೆ ನೀರು ತುಂಬಿಸಿ.. ಜನಸಾಮಾನ್ಯರಲ್ಲಿ ಸಿಕ್ಕಾಪಟ್ಟೆ ವಸೂಲಿ ಮಾಡಲು ಹೊರಟಿರುವ ವಾಟರ್ ಮಾಫಿಯಾವನ್ನೂ ಪಾಲಿಕೆ ನೋಡಿಯೂ ಸುಮ್ಮನಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನಾದ್ರೂ ಅಧಿಕಾರಿಗಳು ಈ ಹಗಲು ದರೋಡೆಕೋರರಿಗೆ ಬ್ರೇಕ್ ಹಾಕಬೇಕಿದೆ.

- ಮಮತಾ ಮರ್ಧಾಳ, ಸುವರ್ಣನ್ಯೂಸ್