ಕರ್ನಾಟಕವು ತನ್ನ ಕಾವೇರಿ ಕೊಳ್ಳದಲ್ಲಿ ಜಲಾಶಯಗಳನ್ನು ನಿರ್ಮಿಸಿದ್ದೇ ಕಾವೇರಿ ಬಿಕ್ಕಟ್ಟಿಗೆ ಕಾರಣ ಎಂದು ತಮಿಳುನಾಡು ಆರೋಪಿಸಿದೆ.
ನವದೆಹಲಿ (ಆ.03): ಕರ್ನಾಟಕವು ತನ್ನ ಕಾವೇರಿ ಕೊಳ್ಳದಲ್ಲಿ ಜಲಾಶಯಗಳನ್ನು ನಿರ್ಮಿಸಿದ್ದೇ ಕಾವೇರಿ ಬಿಕ್ಕಟ್ಟಿಗೆ ಕಾರಣ ಎಂದು ತಮಿಳುನಾಡು ಆರೋಪಿಸಿದೆ.
ಕಾವೇರಿ ಜಲ ನ್ಯಾಯಾಧಿಕರಣ ನೀಡಿದ್ದ ಅಂತಿಮ ಐ ತೀರ್ಪನ್ನು ಪ್ರಶ್ನಿಸಿ ಕಾವೇರಿ ಕೊಳ್ಳದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ನ್ಯಾ. ದೀಪಕ್ ಮಿಶ್ರಾ, ನ್ಯಾ. ಅಮಿತಾವ್ ರಾಯ್ ಮತ್ತು ನ್ಯಾ. ಎ. ಎಂ. ಖಾನ್ವೀಳ್ಕರ್ ಅವರನ್ನು ಒಳಗೊಂಡಿರುವ ವಿಶೇಷ ಪೀಠದ ಮುಂದೆ ತಮಿಳುನಾಡು ಗುರುವಾರ ತನ್ನ ವಾದ ಮಂಡಿಸಿದೆ.
ಕರ್ನಾಟಕವು ಕಾವೇರಿ ಕೊಳ್ಳದಲ್ಲಿ ಯಾರ ಅನುಮತಿಯನ್ನೂ ಪಡೆಯದೆ, ಕಾವೇರಿ ನದಿ ಪಾತ್ರದಲ್ಲಿ ಕೆಳಗಿರುವ ತಮಿಳುನಾಡು, ಪಾಂಡಿಚೇರಿಗಳ ಜೊತೆ ಸಮಾಲೋಚನೆಯನ್ನೂ ನಡೆಸದೆ ಏಕಪಕ್ಷೀಯವಾಗಿ ಅಣೆಕಟ್ಟುಗಳನ್ನು ನಿರ್ಮಿಸಲು ಪ್ರಾರಂಭಿಸಿತು. ಈ ಅಣೆಕಟ್ಟುಗಳಿಂದಲೇ ಇಂದು ಕಾವೇರಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ತಮಿಳುನಾಡಿನ ಪರ ವಾದಿಸುತ್ತಿರುವ ಹಿರಿಯ ವಕೀಲ ಶೇಖರ್ ನಾಫ್ಡೆ ವಾದಿಸಿದ್ದಾರೆ. ಕರ್ನಾಟಕವು ಕಟ್ಟಿರುವ ಕೃಷ್ಣರಾಜಸಾಗರ, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳು ಅಕ್ರಮ. ಈ ಅಕ್ರಮ ಅಣೆಕಟ್ಟುಗಳಿಂದ ತಮಿಳುನಾಡಿನ ಹಕ್ಕುಗಳಿಗೆ ಭಂಗ ಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಪಾಲಿನ ನೀರು ಪಡೆಯಲು ತಮಿಳುನಾಡು ಕಾನೂನು ಹೋರಾಟ ನಡೆಸುತ್ತಿದೆ. ತಮಿಳುನಾಡಿನ ಕಾವೇರಿ ಸೀಮೆಯ ಜನ ಕುಡಿಯುವ ನೀರು ಮತ್ತು ಕೃಷಿಗಾಗಿ ಕಾವೇರಿ ನೀರನ್ನೇ ಸಂಪೂರ್ಣವಾಗಿ ನಂಬಿದ್ದಾರೆ ಎಂದು ಹೇಳಿದರು.
ಕಾವೇರಿ ನದಿ ಪಾತ್ರದಲ್ಲಿ ಮೇಲ್ಭಾಗದಲ್ಲಿರುವ ಕರ್ನಾಟಕವು ಕೆಳ ಪಾತ್ರದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ತರುತ್ತಲೇ ಇದೆ. ಕಾವೇರಿ ನ್ಯಾಯಾಧಿಕರಣದ ಆದೇಶವನ್ನೂ ಕರ್ನಾಟಕ ಪಾಲಿಸುತ್ತಿಲ್ಲ. ಕರ್ನಾಟಕದಿಂದ ತಮಿಳುನಾಡಿನ ಮೇಲೆ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಫ್ಡೆ ಆರೋಪಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ನ್ಯಾಯಪೀಠ, ನೀರು ಹಂಚಿಕೆಗಾಗಿ ರಾಜ್ಯಗಳು ಕಿತ್ತಾಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೂಕ ಪ್ರೇಕ್ಷಕನಾಗಿ ನೋಡುತ್ತ ಕೂತಿರುವುದು ಸರಿಯಲ್ಲ. ಕಿತ್ತಾಡುತ್ತಿರುವ ರಾಜ್ಯಗಳ ಜೊತೆಗೆ ಚರ್ಚಿಸಿ ತನ್ನ ನಿಲುವನ್ನು ಅದು ಸ್ಪಷ್ಟ ಪಡಿಸಬೇಕು ಎಂದು ಹೇಳಿದೆ.
ಕರ್ನಾಟಕವು ನ್ಯಾಯಾಧಿಕರಣದ ಆದೇಶವನ್ನು ನಿರಂತರವಾಗಿ ಉಲ್ಲಂಘಿಸುತ್ತಿದ್ದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ತಮಿಳುನಾಡಿಗೆ ಅನ್ಯಾಯ ಮಾಡುತ್ತಿದೆ. ನ್ಯಾಯಾಧಿಕರಣವು 2007 ರಲ್ಲಿ ಅಂತಿಮ ಐ ತೀರ್ಪು ನೀಡಿದ್ದರೂ 2013 ರವರೆಗೆ ಕೇಂದ್ರ ಸರ್ಕಾರ ಈ ತೀರ್ಪಿನ ಅಧಿಸೂಚನೆ ಹೊರಡಿಸಿರಲಿಲ್ಲ. ಆ ಬಳಿಕ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಐ ತೀರ್ಪಿನ ಅಧಿಸೂಚನೆ ಹೊರಬಿತ್ತು. ಹೀಗೆ ತಮಿಳುನಾಡು ತನ್ನ ಹಿತಾಸಕ್ತಿಗಾಗಿ ಪ್ರತಿ ಹಂತದಲ್ಲೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ನಾಫ್ಡೆ ಹೇಳಿದರು.
ತಮಿಳುನಾಡು ಎತ್ತಿರುವ ಎಲ್ಲ ಆಕ್ಷೇಪಗಳನ್ನು ಟಿಪ್ಪಣಿ ಮಾಡಿಕೊಂಡು ತಮ್ಮ ವಾದ ಮಂಡನೆ ಸಂದರ್ಭದಲ್ಲಿ ಆ ಬಗ್ಗೆ ಕೇಂದ್ರದ ನಿಲುವನ್ನು ಸ್ಪಷ್ಟ ಪಡಿಸಬೇಕು ಎಂದು ವಿಚಾರಣಾ ಕಲಾಪದಲ್ಲಿ ಭಾಗಿಯಾಗಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್‌ಗೆ ನ್ಯಾ.ದೀಪಕ್ ಮಿಶ್ರಾ ಸೂಚಿಸಿದರು. ಮುಂದಿನ ಮಂಗಳವಾರ ಮತ್ತೆ ವಿಚಾರಣೆ ಮುಂದುವರಿಯಲಿದೆ.
