"ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಗಿಮಿಕ್ ಮಾಡುತ್ತಿವೆ. ತಮಿಳುನಾಡಿಗೆ ನೀರು ಬಿಡಲು ಅಲ್ಲಿರುವ ರೈತರಿಗೆ ಯಾವುದೇ ಅಭ್ಯಂತರವಿಲ್ಲ. ಸರಕಾರ ಮತ್ತು ರಾಜಕೀಯ ಪಕ್ಷಗಳು ಮಾತ್ರ ಅಡ್ಡಗಾಲಾಗಿ ನಿಂತಿವೆ"

ಚೆನ್ನೈ(ಅ. 03): ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ ತಳೆದಿರುವ ನಿಲುವನ್ನು ತಮಿಳುನಾಡು ವಿರೋಧಿಸಿದೆ. ಕಾವೇರಿ ನಿರ್ವಹಣಾ ಮಂಡಳಿ ರಚಿಸುವ ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಕೇಂದ್ರ ಸರಕಾರದ ನಿಲುವಿನ ಬಗ್ಗೆ ತಮಿಳುನಾಡು ಅಚ್ಚರಿ ವ್ಯಕ್ತಪಡಿಸಿದೆ.

ಕರ್ನಾಟಕ ರಾಜ್ಯವು ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ತತ್'ಕ್ಷಣವೇ ರಚನೆಯಾಗಬೇಕು. ಕೇಂದ್ರ ಸರಕಾರ ತನ್ನ ಅರ್ಜಿಯನ್ನು ಹಿಂಪಡೆದು ಮಂಡಳಿ ರಚನೆಯ ಹಾದಿಯನ್ನು ಸುಗಮಗೊಳಿಸಬೇಕು ಎಂದು ತಮಿಳುನಾಡು ಆಗ್ರಹಿಸಿದೆ.

ತಮಿಳುನಾಡು ಜಲಸಂಪನ್ಮೂಲ ಸಚಿವ ಎಡಪ್ಪಾಡಿ ಪಳನೀಚಾಮಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ವಕ್ತಾರೆ ಸಿ.ಆರ್.ಸರಸ್ವತಿ, ಕಾವೇರಿ ವಿಚಾರದಲ್ಲಿ ಕರ್ನಾಟಕ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

"ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಗಿಮಿಕ್ ಮಾಡುತ್ತಿವೆ. ತಮಿಳುನಾಡಿಗೆ ನೀರು ಬಿಡಲು ಅಲ್ಲಿರುವ ರೈತರಿಗೆ ಯಾವುದೇ ಅಭ್ಯಂತರವಿಲ್ಲ. ಸರಕಾರ ಮತ್ತು ರಾಜಕೀಯ ಪಕ್ಷಗಳು ಮಾತ್ರ ಅಡ್ಡಗಾಲಾಗಿ ನಿಂತಿವೆ. ತಮಿಳುನಾಡಿಗೆ ತನ್ನ ಪಾಲಿನ ನೀರು ಬರುವಂತಾಗಬೇಕು. ಬಹಳ ಕಾಲದಿಂದ ಉಳಿದಿರುವ ಈ ಸಮಸ್ಯೆ ಇತ್ಯರ್ಥವಾಗಬೇಕು," ಎಂದು ಸರಸ್ವತಿ ಒತ್ತಾಯಿಸಿದ್ದಾರೆ.