Asianet Suvarna News Asianet Suvarna News

ತುಂಟ ಕಮೆಂಟ್ ಕೊಟ್ಟ ನಿರ್ದೇಶಕರಿಗೆ ಮೈಚಳಿ ಬಿಡಿಸಿದ ನಟಿ ತಮನ್ನಾ

“ದಂಗಲ್”ನಂತಹ ಮಹಿಳಾ ಕೇಂದ್ರಿತ ಸಿನಿಮಾಗಳು ಬಿಡುಗಡೆಯಾಗುತ್ತಿರುವ ಈ ಕಾಲದಲ್ಲಿ ಸುರಾಜ್’ರಂತಹ ನಿರ್ದೇಶಕರಿದ್ದಾರಲ್ಲಾ ಎಂದು ತಮನ್ನಾ ಖೇದ ವ್ಯಕ್ತಪಡಿಸಿದ್ದಾರೆ.

tamannah rebuke against sexist remark made by director suraaj

ಚೆನ್ನೈ(ಡಿ. 27): ನಟಿಯರು ಸಿನಿಮಾಗಳಲ್ಲಿ ತುಂಡುಡುಗೆ ತೊಟ್ಟರೇನೆ ಚಂದ ಎಂದು ಕಮೆಂಟ್ ಕೊಟ್ಟಿದ್ದ ಕಾಲಿವುಡ್ ನಿರ್ದೇಶಕ ಸುರಾಜ್ ಅವರಿಗೆ ಬಾಹುಬಲಿ ಸಿನಿಮಾ ಖ್ಯಾತಿಯ ನಟಿ ತಮನ್ನಾ ಭಾಟಿಯಾ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. “ದಂಗಲ್”ನಂತಹ ಮಹಿಳಾ ಕೇಂದ್ರಿತ ಸಿನಿಮಾಗಳು ಬಿಡುಗಡೆಯಾಗುತ್ತಿರುವ ಈ ಕಾಲದಲ್ಲಿ ಸುರಾಜ್’ರಂತಹ ನಿರ್ದೇಶಕರಿದ್ದಾರಲ್ಲಾ ಎಂದು ತಮನ್ನಾ ಖೇದ ವ್ಯಕ್ತಪಡಿಸಿದ್ದಾರೆ. ತನಗಷ್ಟೇ ಅಲ್ಲ, ಸಿನಿಮಾ ರಂಗದಲ್ಲಿರುವ ಪ್ರತಿಯೊಬ್ಬ ಮಹಿಳೆಗೂ ಸುರಾಜ್ ಕ್ಷಮೆ ಯಾಚಿಸಬೇಕು ಎಂದು ತಮನ್ನಾ ಆಗ್ರಹಿಸಿದ್ದಾರೆ. ಅದರಂತೆ, ನಿರ್ದೇಶಕ ಸುರಾಜ್ ಅವರು ನಿನ್ನೆ ತಮನ್ನಾ ಹಾಗೂ ಇತರ ಎಲ್ಲಾ ನಾಯಕಿಯರಿಗೂ ಕ್ಷಮೆ ಕೋರಿದ್ದಾರೆ. ಯಾವ ಮಹಿಳೆಯನ್ನೂ ತಾನು ಕೆಟ್ಟದಾಗಿ ಬಿಂಬಿಸುವ ಉದ್ದೇಶ ತನ್ನದಾಗಿರಲಿಲ್ಲ ಎಂದವರು ಸ್ಪಷ್ಟನೆ ನೀಡಿದ್ದಾರೆ.

ಸುರಾಜ್ ಹೇಳಿದ್ದೇನು?
ನಿನ್ನೆ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವ ವೇಳೆ, ಸುರಾಜ್ ಅವರು ಹೀರೋಯಿನ್’ಗಳ ಉಡುಪುಗಳ ಬಗ್ಗೆ ಕಮೆಂಟ್ ಮಾಡಿದ್ದರು.

“ಕಾಸ್ಟೂಮ್ ಡಿಸೈನರ್ ನನ್ನ ಸಿನಿಮಾದ ಹೀರೋಯಿನ್’ಗೆ ಮೊಣಕಾಲಿನವರೆಗಿರುವ ಬಟ್ಟೆಯನ್ನು ವಿನ್ಯಾಸ ಮಾಡಿದ್ದೇ ಆದರೆ, ಅದನ್ನು ಇನ್ನೂ ಚಿಕ್ಕದಾಗಿಸುವಂತೆ ಸೂಚಿಸುತ್ತೇನೆ. ನನ್ನ ಹೀರೋಯಿನ್ ಸಿಟ್ಟಾದರೆ, ಪ್ರೇಕ್ಷಕರು ದುಡ್ಡು ಕೊಡುವುದು ಏನೂ ನೋಡದೇ ಇರಲಲ್ಲ ಎಂದು ಹೇಳುತ್ತೇನೆ... ಹೀರೋ ಫೈಟ್ ಮಾಡುವುದನ್ನು, ಹೀರೋಯಿನ್’ಗಳು ಗ್ಲಾಮರ್ ಆಗಿ ಕಾಣಿಸಿಕೊಳ್ಳುವುದನ್ನು ನೋಡಲೆಂದು ಪ್ರೇಕ್ಷಕರು ದುಡ್ಡು ಕೊಟ್ಟು ಬರುತ್ತಾರೆ. ನಿರ್ದೇಶಕನಾಗಿ ನಾನು ಹೀರೋಯಿನ್’ಗಳು ಮೈತುಂಬಾ ಮುಚ್ಚುವ ಸೀರೆಯುಟ್ಟುಕೊಳ್ಳುವುದನ್ನು ನೋಡಲು ಇಷ್ಟಪಡುವುದಿಲ್ಲ. ಯಾವುದೇ ಕಮರ್ಷಿಯಲ್ ಸಿನಿಮಾಗೂ ಗ್ಲಾಮರ್ ಟಚ್ ಇರಲೇಬೇಕು” ಎಂದು ಸುರಾಜ್ ಅಭಿಪ್ರಾಯಪಟ್ಟಿದ್ದರು.

ತಮನ್ನಾ ಪ್ರತಿಕ್ರಿಯೆ ಏನು?
“ಇದು 2016ರ ಸಮಯ. ಮಹಿಳಾ ಸಬಲೀಕರಣದ ವಿಷಯವಸ್ತು ಇರುವ ದಂಗಲ್’ನಂತರ ಸಿನಿಮಾವನ್ನು ಥಿಯೇಟರ್’ನಲ್ಲಿ ಅರ್ಧಕ್ಕೇ ಬಿಟ್ಟು ಬರಬೇಕಾಯಿತು. ನನ್ನ ನಿರ್ದೇಶಕ ಸುರಾಜ್’ರ ಮಾತಿನಿಂದ ನನಗೆ ನೋವು ಮತ್ತು ಕೋಪ ಎರಡೂ ಆಗಿದೆ. ಅವರು ನನಗೆ ಮಾತ್ರವಲ್ಲ, ಸಿನಿಮಾ ರಂಗದ ಎಲ್ಲಾ ಮಹಿಳೆಯರಿಗೂ ಕ್ಷಮೆ ಯಾಚಿಸಬೇಕು. ನಾವು ಕಲಾವಿದರು ನಟನೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬಂದಿದ್ದೇವೆ. ಆದರೆ, ನಮ್ಮನ್ನು ಒಂದು ವಸ್ತುವನ್ನಾಗಿಸಿಕೊಳ್ಳಲು ಇಷ್ಟಪಡುವುದಿಲ್ಲ. 11ಕ್ಕೂ ಹೆಚ್ಚು ವರ್ಷಗಳಿಂದ ದಕ್ಷಿಣ ಭಾರತದ ಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಸೂಕ್ತ ಎನಿಸುವ ಉಡುಪುಗಳನ್ನೇ ತೊಟ್ಟಿದ್ದೇನೆ. ಆದರೆ, ಯಾರೋ ಒಬ್ಬ ವ್ಯಕ್ತಿ ಆಡಿದ ಮಾತಿನಿಂದ ಇಡೀ ಸಿನಿಮಾ ರಂಗವನ್ನು ದೂಷಿಸುವುದು ತರವಲ್ಲ” ಎಂದು ತಮನ್ನಾ ಟ್ವೀಟ್ ಮಾಡಿದ್ದಾರೆ.

ಕತ್ತಿ ಸಂಡೈ ಸಿನಿಮಾದ ತಂಡದವರು:
ಸುರಾಜ್ ನಿರ್ದೇಶನದ ತಮಿಳಿನ “ಕತ್ತಿ ಸಂಡೈ”(ಕತ್ತಿ ಯುದ್ಧ) ಚಿತ್ರಕ್ಕೆ ತಮನ್ನಾ ಅವರೇ ಹೀರೋಯಿನ್. ವಿಶಾಲ್ ಹೀರೋ ಆಗಿರುವ ಈ ಸಿನಿಮಾ ನಿರೀಕ್ಷೆಯಂತೆ ಪಕ್ಕಾ ಆಕ್ಷನ್ ಮೂವಿ ಆಗಿರಲಿದೆ.

Follow Us:
Download App:
  • android
  • ios