ಅಕ್ಟೋಬರ್‌ 2; ಇದು ಇಡೀ ವಿಶ್ವದಲ್ಲೇ ಮಹತ್ವದ ದಿನ. ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹುಟ್ಟಿದ ದಿನ. ತಮ್ಮದೇ ಬದುಕಿನ ಮೂಲಕ ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಾತ್ಮನ ಹುಟ್ಟಿದ ದಿನವನ್ನು ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ಎಲ್ಲ ದೇಶಗಳೂ ಆಚರಿಸಿಕೊಂಡು ಬರುತ್ತಿವೆ. ಅದು ಭಾರತೀಯರಾದ ನಮಗೆಲ್ಲ ಅತ್ಯಂತ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿ.

ಸತ್ಯಾಗ್ರಹದ ಶಕ್ತಿ ಅರಿತ ಮಹಾತ್ಮ

ಇಡೀ ಪ್ರಪಂಚವೇ ಮಹಾತ್ಮ ಗಾಂಧಿಯವರನ್ನು ಇಂದಿಗೂ ನೆನೆಯುವುದಕ್ಕೆ ಪ್ರಮುಖ ಕಾರಣ ಅವರು ಅನುಸರಿಸಿದ ಜೀವನ ಮಾರ್ಗ. ಬದುಕಿನ ಸಂಕೀರ್ಣ ಸಮಸ್ಯೆಗಳಿಗೆ ಅವರು ಅತ್ಯಂತ ಸರಳ ಸಂಗತಿಗಳ ಮೂಲಕ ಪರಿಹಾರ ಕಂಡುಕೊಂಡರು. ಜಗತ್ತನ್ನೇ ನಡುಗಿಸುವ ಸತ್ಯಾಗ್ರಹದ ಶಕ್ತಿ ಅವರಲ್ಲಿ ಮೊದಲ ಬಾರಿಗೆ ಕಂಡದ್ದು 1893ರ ಆ ರಾತ್ರಿ ದಕ್ಷಿಣ ಆಫ್ರಿಕಾದ ಪೀಟರ್‌ಮಾರಿಜ್‌ಬಗ್‌ ರೈಲ್ವೇ ನಿಲ್ದಾಣದಲ್ಲಿ. ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಬಂಧಮುಕ್ತಗೊಳಿಸಲು ಅವರಿಗೆ ಸತ್ಯಾಗ್ರಹದಂತಹ ಅತ್ಯಂತ ಸರಳ ಮಾರ್ಗವೇ ಎಲ್ಲ ಶಕ್ತಿಯನ್ನು ನೀಡಿತು.

ರಾಷ್ಟ್ರಪಿತನ ಒಂದೂವರೆ ಶತಮಾನದ ಸ್ಮರಣೆ; ಭಾರತದಲ್ಲಿ ಏನೇನು ಕಾರ್ಯಕ್ರಮ?

ಅವರ ಚರಕದ ನೂಲಿಗೆ, ಅವರ ಹಿಡಿಯಲ್ಲಿನ ಉಪ್ಪಿಗೆ ಇಡೀ ದೇಶಕ್ಕೆ ಸಂಚಲನ ತುಂಬುವ ಶಕ್ತಿ ಇತ್ತು. ಎಷ್ಟೋ ಜನರು ಭಾರತದಲ್ಲಿ ಒಂದು ಉಡುಪಿಗೂ ಪರದಾಡುತ್ತಿರುವಾಗ ತಾನು ಮಾತ್ರ ಏಕೆ ಮೈತುಂಬಾ ಬಟ್ಟೆಧರಿಸಬೇಕೆಂದು ತಮಗೆ ತಾವೇ ಪ್ರಶ್ನಿಸಿಕೊಂಡು ಕೊನೆಯುಸಿರು ಇರುವ ತನಕವೂ ಕೇವಲ ದೋತರದಲ್ಲೇ ಬದುಕಿದ ‘ಫಕೀರ’ ಅವರು. ಕಾನೂನಿನ ಭಯದಿಂದ ನಾವು ಸನ್ನಡತೆಯನ್ನು ತೋರಿಸಬೇಕಾದ ಅವಶ್ಯಕತೆಗಿಂತಲೂ, ನಾವು ಸಹಜವಾಗಿ ಸನ್ನಡತೆಯುಳ್ಳ ವ್ಯಕ್ತಿಯಾಗಬೇಕೆಂದು ಗಾಂಧಿ ಪ್ರತಿಪಾದಿಸಿದರು. ಅವರ ಸ್ವರಾಜ್ಯದ ಪರಿಕಲ್ಪನೆ ಇದೇ ಆಶಯದೊಂದಿಗೆ ಹುಟ್ಟಿದ್ದು.

ಗಾಂಧಿಗಿಂತ ಭಿನ್ನರಲ್ಲ ಶಾಸ್ತ್ರೀಜಿ

ಹಾಗೆಯೇ ಅವರೊಂದಿಗೆ ನಮ್ಮ ದೇಶದ ಇನ್ನೊಬ್ಬ ಮಹಾಪುರುಷನ ಜಯಂತಿಯನ್ನೂ ಇದೇ ದಿನ ಆಚರಿಸುತ್ತೇವೆ. ಅವರೇ ದೇಶದ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ. ಶಾಸ್ತ್ರಿಯವರ ಬದುಕು ಗಾಂಧೀಜಿಯವರ ಬದುಕಿಗಿಂತ ಭಿನ್ನವೇನಲ್ಲ. ದೇಶದ ಪ್ರಧಾನಿಯಾಗಿದ್ದಾಗಲೂ ಅವರು ತಮ್ಮ ಮೊಮ್ಮಗನ ಶಾಲಾ ಶುಲ್ಕ ಪಾವತಿಸಲು ತಿಂಗಳ ಸಂಬಳ ಬರುವ ತನಕ ಕಾಯಬೇಕಾದಂತಹ ಪರಿಸ್ಥಿತಿಯಲ್ಲಿದ್ದರು. ದೇಶದ ರೈತರ ಬದುಕು ಹಸನಾಗದೇ ಯಾವ ಅಭಿವೃದ್ಧಿಯೂ ಸಾಧ್ಯವಾಗದು ಎಂದು ನಂಬಿದವರು ಶಾಸ್ತ್ರೀಜೀ.

ಅವರು ಪ್ರಧಾನಿಯಾಗಿದ್ದಾಗ ಅತ್ಯಂತ ಜನಪ್ರಿಯವಾಗಿದ್ದ ಅವರ ಘೋಷಣೆ: ಜೈ ಜವಾನ್‌, ಜೈ ಕಿಸಾನ್‌. ಗಾಂಧೀಜಿ ಹಾಗೂ ಶಾಸ್ತ್ರೀಜಿ ಈ ಇಬ್ಬರೂ ಹಾಕಿಕೊಟ್ಟಸಹನಶೀಲತೆಯ ಬುನಾದಿಯೇ ಇಂದು ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ವಿಫಲವಾಗದೇ ಇನ್ನೂ ಗಟ್ಟಿಯಾಗಿ ಮುಂದುವರೆಯಲು ಕಾರಣ ಎಂದರೆ ಅತಿಶಯೋಕ್ತಿಯೇನಲ್ಲ.

ನಮೋ ಗಾಂಧಿಗಿರಿ! 150 ನೇ ಗಾಂಧಿ ಜಯಂತಿ ಪ್ರಯುಕ್ತ ಮಹತ್ವದ ಘೋಷಣೆ?

ಸರಳ ಜೀವನ-ಉದಾತ್ತ ಚಿಂತನ

ಈ ಇಬ್ಬರೂ ಉಪವಾಸಕ್ಕೆ ಒತ್ತು ಕೊಟ್ಟವರು. ಎಂತಹ ಸರಳ ಮಾರ್ಗ ನೋಡಿ! ಬ್ರಿಟಿಷರನ್ನು ಭಾರತದಿಂದ ಹೊರ ಹೋಗುವಂತೆ ಮಾಡುವಾಗ ಅನೇಕ ಬಾರಿ ಉಪವಾಸ ಸತ್ಯಾಗ್ರಹವನ್ನೇ ಗಾಂಧೀಜಿ ಕೈಗೊಂಡಿದ್ದು ನಮಗೆಲ್ಲಾ ಗೊತ್ತಿದೆ. ಲಾಲ್‌ ಬಹದ್ದೂರ್‌ ಶಾಸ್ತ್ರಿಯವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತ್ತು. ಆಗ ಆಹಾರವನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಸಂದರ್ಭ ಒದಗಿತ್ತು. ಸಾಲದ ಭಾರ ಅಧಿಕವಾಯಿತು.

ವಾರದ ಒಂದು ದಿನ ಅಂದರೆ ಸೋಮವಾರ ಊಟ ತ್ಯಜಿಸುವ ನಿರ್ಧಾರ ಕೈಗೊಂಡರು. ಹಾಗೆಯೇ ಇಡೀ ದೇಶವಾಸಿಗಳಿಗೂ ಸೋಮವಾರ ಉಪವಾಸ ಮಾಡಲು ಕರೆ ನೀಡಿದರು. ಈ ಇಬ್ಬರ ಜೀವನ ದಾರಿ ಅವರ ಸ್ವಾಭಿಮಾನ ಯಾತ್ರೆಗೆ ಮುಕುಟಪ್ರಾಯವಾಗಿತ್ತು. ಪ್ರಧಾನಿಯಾಗಿದ್ದಾಗಲೂ, ಹರುಕು ಪಂಚೆಯಲ್ಲಿದ್ದರೂ ನಡೆನುಡಿಯಲ್ಲಿ ಗಾಂಧಿ-ಶಾಸ್ತ್ರೀಜಿ ಮಾತ್ರ ತಮ್ಮ ಉದಾತ್ತ ನಿಲುವನ್ನು ಬಿಟ್ಟುಕೊಡಲಿಲ್ಲ. ಅವರಿಬ್ಬರ ಬದುಕು ’ಸರಳ ಜೀವನ-ಉದಾತ್ತ ಚಿಂತನ’ ಎಂಬುದಾಗಿತ್ತು.

ನುಡಿದಂತೆ ನಡೆದವರು

ಇಂತಹ ಮಹಾನ್‌ ವ್ಯಕ್ತಿಗಳು ನಮ್ಮ ನಡುವೆ ಉಳಿದು ಹೋಗಿದ್ದಾರೆ ಎಂಬುದೇ ನಮಗೆಲ್ಲ ಹೆಮ್ಮೆ. ಈ ಮಹಾಪುರುಷರು ಬಿಟ್ಟು ಹೋದ ದಾರಿಯಲ್ಲಿ ನಾವು ನಡೆಯುವುದು ಅವರಿಗೆ ಅರ್ಪಿಸುವ ಗೌರವ. ನಮಗೆ ಎಲ್ಲ ವಿಚಾರದಲ್ಲೂ ಮಹಾತ್ಮಾ ಗಾಂಧಿಯವರಷ್ಟೇ ಲಾಲ್‌ಬಹದ್ದೂರ್‌ ಶಾಸ್ತ್ರಿಯವರೂ ಪ್ರಮುಖರಾಗುತ್ತಾರೆ. ಇಂತಹ ನಡೆ-ನುಡಿಗಳಿಂದಾಗಿಯೇ ಈ ಇಬ್ಬರೂ ನಾಯಕರು ಈಗಲೂ ನಮ್ಮ ದೇಶದ ಸಾಕ್ಷಿಪ್ರಜ್ಷೆ ಹಾಗೂ ಅಂತರ್‌ಪ್ರಜ್ಞೆಯಾಗಿಯೇ ಉಳಿದಿದ್ದಾರೆ.

ಸಾವಿರಾರು ವರ್ಷಗಳಾದರೂ ಅವರನ್ನು ನಾವು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಹಾಗೆಯೇ ಅವರ ಬದುಕನ್ನು ಯಾರೇ ಬೇಕಾದರೂ ಅಳವಡಿಸಿಕೊಳ್ಳುವಷ್ಟುಸುಲಭವಾಗಿತ್ತು, ಅವರ ಜೀವನ ತೆರೆದಿಟ್ಟಪುಸ್ತಕದಂತಿತ್ತು. ಒಳ ಹೋದರೂ ಅಷ್ಟೆ, ಹೊರಗೆ ನೋಡಿದರೂ ಅಷ್ಟೇ. ಎಲ್ಲರಿಗೂ ಕಾಣುವಂತೆಯೇ ಬದುಕಿದರು. ಬದುಕಿದಂತೆಯೇ ಕಂಡರು.

ಇವರನ್ನು ಇಂದಷ್ಟೇ ನೆನೆಯುವ ಅವಶ್ಯಕತೆಯಿಲ್ಲ. ಅನುದಿನವೂ ಗಾಂಧೀ-ಶಾಸ್ತ್ರೀ ನಮ್ಮ ನೆನಹಿಗೆ ಪಾತ್ರರು. ನಿಮ್ಮೆಲ್ಲರಿಗೂ ಗಾಂಧಿ-ಶಾಸ್ತ್ರಿ ಜಯಂತಿಯ ಶುಭ ಹಾರೈಕೆಗಳು.

-  ಎಸ್‌. ಸುರೇಶ್‌ಕುಮಾರ್‌

ರಾಜ್ಯ ಪ್ರಾಥಮಿಕ-ಪ್ರೌಢಶಿಕ್ಷಣ, ಸಕಾಲ ಮತ್ತು ಕಾರ್ಮಿಕ ಸಚಿವ