ಇಡೀ ವಿಶ್ವಕ್ಕೇ ಅಹಿಂಸೆಯ ತತ್ವ ಸಾರಿದ ಹಾಗೂ ಅಹಿಂಸಾ ಹೋರಾಟದ ಮೂಲಕವೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ವರ್ಷಾಚರಣೆ ಈ ವರ್ಷವಿಡೀ ಅದ್ಧೂರಿಯಾಗಿ ನಡೆಯಲಿದೆ. ಗಾಂಧೀಜಿ ಎಂದರೆ ಅಹಿಂಸೆ ಹಾಗೂ ಭಾರತ ಎಂದು ಜಗತ್ತಿನ ಮೂಲೆಮೂಲೆಯ ಜನರೂ ಗುರುತಿಸುವಂತೆ ಮಾಡಿದ ಬಾಪು ಅವರ ಜನ್ಮ ವರ್ಷಾಚರಣೆ ಕಳೆದ ವರ್ಷವೇ ಆರಂಭಗೊಂಡಿದ್ದು, ಒಟ್ಟಾರೆ ಎರಡು ವರ್ಷಗಳ ಕಾಲ ನಡೆಯುತ್ತಿದೆ.

2018 ರ ಮಾರ್ಚ್ 18 ರಂದು ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಈ ವರ್ಷ ಗಾಂಧೀಜಿ ಅವರ ೧೫೦ನೇ ಜನ್ಮ ಸಂಸ್ಮರಣೆ ಕಾರ್ಯಕ್ರಮಗಳು ಆರಂಭವಾಗುತ್ತಿದ್ದು, ಅದನ್ನು ಯಾವ ರೀತಿ ಆಚರಿಸಬೇಕು ಎಂದು ದೇಶವಾಸಿಗಳಿಂದ ಸಲಹೆ ಕೇಳಿದ್ದರು. ಹೊಸ ಬಗೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸುವಂತೆ ಹಾಗೂ ಯಾವೆಲ್ಲಾ ಹೊಸ ಅಭ್ಯಾಸ ಅಥವಾ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬಹುದು ಎಂದು ಸರ್ಕಾರಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಗಾಂಧೀಜಿ ಅವರ ೧೫೦ನೇ ವರ್ಷಾಚರಣೆ ಲಾಂಛನ ಯಾವ ರೀತಿ ಇರಬೇಕು, ಯಾವ ಘೋಷಣೆ ಹೊಂದಿರಬೇಕು ಎಂಬೆಲ್ಲಾ ವಿವರಗಳನ್ನು ಜನರಿಂದ ಬಯಸಿದ್ದರು.

ನಮೋ ಗಾಂಧಿಗಿರಿ! 150 ನೇ ಗಾಂಧಿ ಜಯಂತಿ ಪ್ರಯುಕ್ತ ಮಹತ್ವದ ಘೋಷಣೆ?

ಅದಾದ ಬಳಿಕ ವಿಶ್ವದ 124 ದೇಶಗಳ ಪ್ರಖ್ಯಾತ ಗಾಯಕರಿಂದ ಗಾಂಧೀಜಿ ಅವರ ನೆಚ್ಚಿನ ಭಜನೆಯಾದ ‘ವೈಷ್ಣವ ಜನತೋ’ ಹಾಡಿಸಿ ಸರ್ಕಾರ ಗಮನ ಸೆಳೆದಿತ್ತು. 2014 ರ ಅ.2 ರ ಗಾಂಧಿ ಜಯಂತಿ ದಿನವೇ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅದು ಇನ್ನೂ ಮುಂದುವರಿದುಕೊಂಡು ಬಂದಿದೆ. ಈ ವರ್ಷ ಅ.2 ರಂದು ದೇಶವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಗುರಿಯನ್ನು ತಲುಪುವ ಮೂಲಕ ಗಾಂಧೀಜಿ ಅವರಿಗೆ ಆ ಸಾಧನೆ ಅರ್ಪಣೆ ಮಾಡಲು ಕೇಂದ್ರ ಸರ್ಕಾರ ತುದಿಗಾಲಿನಲ್ಲಿ ನಿಂತಿದೆ.

ಬಜೆಟ್‌ನಲ್ಲೂ ಗಾಂಧಿ ಜಪ ಗಾಂಧಿ ಸಂಸ್ಮರಣೆಯನ್ನು ಕಾರ್ಯಕ್ರಮಗಳಿಗಷ್ಟೇ ಸರ್ಕಾರ ಸೀಮಿತ ಮಾಡಲಿಲ್ಲ. ಕಳೆದ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಗಾಂಧಿ ವಿಚಾರ ಧಾರೆಗಳಿಗೆ ಸರ್ಕಾರ ಒತ್ತು ನೀಡಿತ್ತು. ಸ್ವಚ್ಛ ಭಾರತ ಯೋಜನೆಯ ಮೇಲೆ ನಿಗಾ ಇಡಲು ಅ.2 ರಂದು ದೆಹಲಿಯ ಗಾಂಧಿ ಸಮಾಧಿ ಸ್ಥಳವಾದ ರಾಜಘಾಟ್‌ನಲ್ಲಿ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ತೆರೆಯುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ್ದರು. ಗಾಂಧೀಜಿ ಅವರಿಗೆ ಸಂಬಂಧಿಸಿದ ಸಾಹಿತ್ಯ, ಧ್ವನಿ ಹಾಗೂ ವಿಡಿಯೋಗಳನ್ನು ಈಗಿನ ಡಿಜಿಟಲ್ ಯುಗದಲ್ಲಿ ಜನರಿಗೆ ಒದಗಿಸುವ ಸಲುವಾಗಿ 2018 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ‘ಗಾಂಧಿ 150’ (ಎಚ್ಞಜಿ. ಜಟ.ಜ್ಞಿ) ಎಂಬ ವೆಬ್‌ಸೈಟ್ ಕೂಡ ಆರಂಭಿಸಿದೆ. ಇದರಲ್ಲಿರುವ ಎಲ್ಲ ಮಾಹಿತಿಯನ್ನು ಉಚಿತವಾಗಿ ಪಡೆಯಹುದಾಗಿದೆ. ಇದಲ್ಲದೆ, ಗಾಂಧೀಜಿ ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಒಂದೇ ವೇದಿಕೆಯಲ್ಲಿ ಜನರಿಗೆ ಒದಗಿಸಲು ವಿಕಿಪೀಡಿಯಾ ಮಾದರಿಯಲ್ಲಿ ಗಾಂಧಿಪೀಡಿಯಾ ಆರಂಭಿಸಲಾಗುವುದು ಎಂದು ತಿಳಿಸಿದೆ.

ಈ ಮಧ್ಯೆ, ‘ವಸುಧೈವ ಕುಟುಂಬಕಂ: ಸಮಕಾಲೀನ ಜಗತ್ತಿಗೆ ಗಾಂಧಿ: ಮಹಾತ್ಮ ಗಾಂಧಿ ಅವರ 150 ನೇ ಜನ್ಮ ವರ್ಷಾಚರಣೆ’ ಎಂಬ ಮೊದಲ ವಿಶ್ವ ಯುವ ಸಮ್ಮೇಳನವನ್ನು ದೆಹಲಿಯಲ್ಲಿ ಯುನೆಸ್ಕೋದ ಮಹಾತ್ಮ ಗಾಂಧಿ ಶೈಕ್ಷಣಿಕ ಸಂಸ್ಥೆ ಇತ್ತೀಚೆಗೆ ಆಯೋಜನೆಗೊಳಿಸಿತ್ತು. ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಹಾಗೂ ಯುರೋಪ್ ಖಂಡಗಳ 27 ದೇಶಗಳಿಂದ ಸುಮಾರು 1 ಸಾವಿರ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಿಶ್ವದ ವಿವಿಧ ದೇಶಗಳಲ್ಲಿ ಈ ವರ್ಷ ಗಾಂಧಿ ಸ್ಮರಣೆ ಕಾರ್ಯಕ್ರಮ ನಡೆಯುವಂತೆ ಭಾರತ ಸರ್ಕಾರ ನೋಡಿಕೊಂಡಿದೆ. ಇನ್ನಷ್ಟು ಕಾರ್ಯಕ್ರಮಗಳು ಆಯೋಜನೆಯಾಗುತ್ತಿವೆ. ಈ ನಡುವೆ, ಯುಎಇ ಪ್ರವಾಸದ ಸಂದರ್ಭದಲ್ಲಿ ಗಾಂಧೀಜಿ ಅವರ ಸ್ಮಾರಕ ಅಂಚೆ ಚೀಟಿಯನ್ನು ಮೋದಿ ಅವರು ಬಿಡುಗಡೆ ಮಾಡಿದ್ದಾರೆ. ವಿಶ್ವದ ಹಲವಾರು ದೇಶಗಳು ಇದೇ ರೀತಿಯ ಅಂಚೆ ಚೀಟಿಯನ್ನು ಹೊರತಂದು ಗಾಂಧೀಜಿಯನ್ನು ಸ್ಮರಿಸಿವೆ.

ಮತ್ತೊಂದೆಡೆ, ಗಾಂಧೀಜಿ ಅವರ ಜನ್ಮದಿನವಾದ ಅ.2 ರಿಂದ ಅವರ ಪುಣ್ಯತಿಥಿಯಾದ ಜ.30 ರವರೆಗೆ ಬಿಜೆಪಿ ಸಂಸದರು 150 ಕಿ.ಮೀ. ಪಾದಯಾತ್ರೆ ಕೈಗೊಳ್ಳಬೇಕು. ಇದಕ್ಕಾಗಿ 150 ಗುಂಪುಗಳನ್ನು ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಮಾಡಬೇಕು ಎಂಬ ಸೂಚನೆಯನ್ನು ಮೋದಿ ಅವರು ಈಗಾಗಲೇ ಕೊಟ್ಟಿದ್ದಾರೆ. ಗಾಂಧಿ 150 ನೇ ವರ್ಷಾಚರಣೆ ಅಂಗವಾಗಿ ವಿಶ್ವದ ವಿವಿಧ ದೇಶಗಳಲ್ಲಿ ಜಾಗತಿಕ ಸೈಕ್ಲಿಂಗ್ ಕಾರ್ಯಕ್ರಮ, ಸಸ್ಯಾಹಾರ ಉತ್ಸವ, ಜಗತ್ತಿನ 150 ಪ್ರಸಿದ್ಧ ಲೇಖಕರಿಂದ ಗಾಂಧಿ ಕುರಿತು ಲೇಖನ, ಗಾಂಧಿ ಅವರು ಇಷ್ಟಪಡುತ್ತಿದ್ದ ಖಾದಿಯನ್ನು ವಿಶ್ವಾದ್ಯಂತ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಈ ಪೈಕಿ ಹಲವು ದೇಶಗಳಲ್ಲಿ ಈ ಕಾರ್ಯಕ್ರಮಗಳು ನಡೆದಿವೆ. ಹೊಸ ಬಗೆಯ ಕಾರ್ಯಕ್ರಮಗಳು ಕೂಡ ಆಯೋಜನೆಗೊಳ್ಳುತ್ತಿವೆ. ಒಟ್ಟಿನಲ್ಲಿ ಈಗಿನ ಕಾಲದವರಿಗೆ ಗಾಂಧೀಜಿ ಎಂಬ ಅಹಿಂಸಾ ಮೂರ್ತಿಯ ಸಂದೇಶಗಳನ್ನು ಸಾರುವ ಪ್ರಯತ್ನ ನಡೆಯುತ್ತಿದೆ.

ವಿಶ್ವಸಂಸ್ಥೆ ಸೇರಿದಂತೆ ವಿಶ್ವಾದ್ಯಂತ ಆಚರಣೆ

ವಿಶ್ವಸಂಸ್ಥೆಯಲ್ಲಿ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ನೆದರ್ಲೆಂಡ್‌ ಸರ್ಕಾರ ಮುಂದಿನ ಒಂದು ವಾರ ಸಭೆ, ಸೈಕಲ್‌ ರಾರ‍ಯಲಿ, ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬ್ರಿಟನ್‌, ದಕ್ಷಿಣ ಕೊರಿಯಾ, ಆಸ್ಪ್ರೇಲಿಯಾ, ಡೊಮಿನಿಕನ್‌ ರಿಪಬ್ಲಿಕ್‌ ಸೇರಿದಂತೆ ಹಲವು ದೇಶಗಳು ಅದ್ಧೂರಿ ಗಾಂಧಿ ಜಯಂತಿಗೆ ಭರದ ಸಿದ್ಧತೆ ಮಾಡಿಕೊಂಡಿವೆ. ಲಂಡನ್‌ನಲ್ಲಿ ಸಸ್ಯಾಹಾರ ಉತ್ಸವ ನಡೆಸಲಾಗುತ್ತದೆ. ವಿಶ್ವದ 54 ದೇಶಗಳಲ್ಲಿ ಬುಧವಾರ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತದೆ.

ಬಿಜೆಪಿಯಿಂದ ಸಂಕಲ್ಪ ಯಾತ್ರೆ

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಬುಧವಾರ ದೆಹಲಿಯಲ್ಲಿ ಪಕ್ಷದ ಗಾಂಧೀ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ದೇಶಾದ್ಯಂತ 4 ತಿಂಗಳು ನಡೆಯುವ ಈ ಆಂದೋಲನದಲ್ಲಿ ಪಕ್ಷದ ನಾಯಕರು ಗಾಂಧಿ ಚಿಂತನೆಗಳು, ಸ್ವಚ್ಛತೆ, ಸರಳತೆ, ಖಾದಿ ಬಳಕೆ, ಅಹಿಂಸೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಅಲ್ಲದೆ ಬುಧವಾರ ಪಕ್ಷದ ಎಲ್ಲಾ ನಾಯಕರಿಗೂ ಕನಿಷ್ಠ 2 ಕಿ.ಮೀ ಪಾದಯಾತ್ರೆ ನಡೆಸಿ ಆ ಪ್ರದೇಶವನ್ನು ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ಮಾಡುವಂತೆ ಸೂಚಿಸಲಾಗಿದೆ.

ಇಂದು ದೇಶಾದ್ಯಂತ ಕಾಂಗ್ರೆಸ್‌ ಯಾತ್ರೆ

ಕಾಂಗ್ರೆಸ್‌ ಬುಧವಾರ ದೇಶವ್ಯಾಪಿ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಭಾಗವಾಗಿ ದೆಹಲಿಯಲ್ಲಿ ಸ್ವತಃ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗುವ ಈ ಪಾದಯಾತ್ರೆಯು ದೆಹಲಿ ಕಾಂಗ್ರೆಸ್‌ ಘಟಕದಿಂದ ಆರಂಭಗೊಂಡು ಮಹಾತ್ಮ ಗಾಂಧೀಜಿ ಅವರ ಸಮಾಧಿ ಇರುವ ರಾಜ್‌ಘಾಟ್‌ನಲ್ಲಿ ಗೌರವ ನಮನ ಸಲ್ಲಿಕೆಯೊಂದಿಗೆ ಸಮಾಪ್ತಿಯಾಗಲಿದೆ.

ಉ.ಪ್ರ.ದಲ್ಲಿ ಸತತ 36 ಗಂಟೆ ಕಲಾಪ

ಉತ್ತರಪ್ರದೇಶ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸತತ 36 ಗಂಟೆ ಕಲಾಪ ನಡೆಸಲು ನಿರ್ಧರಿಸಲಾಗಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಉಭಯ ಸದನಗಳ ಕಲಾಪ ಆರಂಭವಾಗಲಿದೆ. ಹಗಲು-ರಾತ್ರಿ ವಿರಾಮವಿಲ್ಲದೇ ನಡೆಯುವ ಈ ವಿಶೇಷ ವಿಧಾನಮಂಡಲ ಕಲಾಪದಲ್ಲಿ ಮಹಾತ್ಮ ಗಾಂಧಿ ಅವರ ಚಿಂತನೆಗಳು, ಸುಸ್ಥಿರ ಅಭಿವೃದ್ಧಿ ಗುರಿ ಕುರಿತ ವಿಶ್ವಸಂಸ್ಥೆ ನಿಗದಿಪಡಿಸಿರುವ ಗುರಿ ಮತ್ತಿತರ ವಿಷಯಗಳನ್ನು ಚರ್ಚಿಸಲಾಗುತ್ತದೆ.