ಹಿಂದೂಗಳನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದ' ಮೊಘಲ್ ದೊರೆ  ಷಹಜಹಾನ್‌ನನ್ನು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ 'ನಾವು ಇತಿಹಾಸವನ್ನೇ ಬದಲಿಸುತ್ತೇವೆ' ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಹೇಳಿದ್ದಾರೆ.

ನವದೆಹಲಿ (ಅ.16): ಹಿಂದೂಗಳನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದ' ಮೊಘಲ್ ದೊರೆ ಷಹಜಹಾನ್‌ನನ್ನು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ 'ನಾವು ಇತಿಹಾಸವನ್ನೇ ಬದಲಿಸುತ್ತೇವೆ' ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಅಂತಹ ವ್ಯಕ್ತಿಗಳನ್ನು ಭಾರತದ ಭವ್ಯ ಇತಿಹಾಸದ ಭಾಗವಾಗಿ ಪರಿಗಣಿಸುವುದಾದರೆ, ನಾವು ಇತಿಹಾಸವನ್ನೇ ಬದಲಿಸುತ್ತೇವೆ ಎಂದು ಪೂರ್ಣ ವಿಶ್ವಾಸದೊಂದಿಗೆ ಹೇಳಬಲ್ಲೆ' ಎಂದು ಅವರು ಪ್ರತಿಪಾದಿಸಿದರು. ಮೊಘಲ್ ದೊರೆ ನಿರ್ಮಿಸಿದ ತಾಜ್ ಮಹಲ್ 'ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು' ಎಂದು ಪರಿಗಣಿಸುವುದನ್ನು ಅವರು ವಿರೋಧಿಸಿದರು. ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ರಾಜ್ಯದ ಐತಿಹಾಸಿಕ ಸ್ಥಳಗಳ ಪಟ್ಟಿಯಿಂದ ತಾಜ್‌ಮಹಲನ್ನು ಕೈಬಿಟ್ಟಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಅದನ್ನು ನಿರ್ಮಿಸಿದ ವ್ಯಕ್ತಿಯನ್ನು ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಭಾಗವಾಗಿ ಪರಿಗಣಿಸುವುದೇಕೆ ಎಂದು ಅಚ್ಚರಿ ವ್ಯಕ್ತಪಡಿಸಿದರು. 'ಐತಿಹಾಸಿಕ ಸ್ಥಳಗಳ ಪಟ್ಟಿಯಿಂದ ತಾಜ್‌ಮಹಲ್ ಹೆಸರು ಕೈಬಿಟ್ಟಾಗ ಹಲವರು ದುಃಖಿಸಿದರು. ಯಾವ ಬಗೆಯ ಇತಿಹಾಸ? ಯಾವ ಸ್ಥಳದ ಇತಿಹಾಸ? ಯಾರ ಇತಿಹಾಸ? ತನ್ನ ತಂದೆಯನ್ನೇ ಜೈಲಿಗಟ್ಟಿದವನು ತಾಜ್‌ಮಹಲ್‌ ಕಟ್ಟಿದ ಎಂಬ ಇತಿಹಾಸವೆ? ಉತ್ತರ ಪ್ರದೇಶ ಮತ್ತು ಇಡೀ ಭಾರತದಿಂದಲೇ ಹಿಂದೂಗಳನ್ನು ಸರ್ವನಾಶ ಮಾಡಲು ಬಯಸಿದ್ದ ಎಂಬ ಇತಿಹಾಸವೆ?' ಎಂದು ಪ್ರಶ್ನಿಸಿದರು ಸೋಮ್‌. ವಿಶ್ವ ಪಾರಂಪರಿಕ ತಾಣವೆಂದ ಯುನೆಸ್ಕೋ ಮಾನ್ಯತೆ ಪಡೆದ ತಾಜ್‌ಮಹಲ್‌ಗೆ ಪ್ರತಿವರ್ಷ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಅವರಲ್ಲಿ ಹೆಚ್ಚಿನವರೂ ವಿದೇಶೀಯರು.