Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ ಹಬ್ಬುತ್ತಿದೆ ಎಚ್‌1ಎನ್‌1 ಮಹಾಮಾರಿ

ರಾಜ್ಯದಲ್ಲಿ ಮಹಾಮಾರಿ ಹಂದಿ ಜ್ವರ ಮತ್ತೆ ಉಲ್ಬಣಿಸಿದೆ. 10 ದಿನದಲ್ಲಿ ರಾಜ್ಯದಲ್ಲಿ 17 ಮಂದಿ ರೋಗಕ್ಕೆ ಬಲಿಯಾಗಿದ್ದಾರೆ. 

Swine Flu in Karnataka 17 Death in 10 Days
Author
Bengaluru, First Published May 16, 2019, 8:00 AM IST

ಬೆಂಗಳೂರು :  ರಾಜ್ಯದಲ್ಲಿ ಎಚ್‌1ಎನ್‌1 (ಹಂದಿ ಜ್ವರ) ಮಹಾಮಾರಿ ತನ್ನ ಮರಣ ಮೃದಂಗ ಮುಂದುವರೆಸಿದೆ. ಏಪ್ರಿಲ್‌ ಕೊನೆಯ ವಾರದಲ್ಲಿ 39 ಇದ್ದ ಎಚ್‌1ಎನ್‌1 ಮೃತರ ಸಂಖ್ಯೆ ಈಗ 56ಕ್ಕೆ ಹೆಚ್ಚಾಗಿದೆ. ಮೇ 4ರಂದು ನಡೆದ ‘ಮರಣ ಲೆಕ್ಕಪರಿಶೋಧನಾ ಸಮಿತಿ’ ಸಭೆಯಲ್ಲಿ 17 ಮಂದಿ ಸೋಂಕಿತರು ಸಾವನ್ನಪ್ಪಿರುವುದು ದೃಢಪಟ್ಟಿದೆ.

ಅಲ್ಲದೆ, ಮೇ 16ರಂದು ಗುರುವಾರ ಮತ್ತೆ ಸಮಿತಿ ಸಭೆ ಸೇರಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವುದು ಬಹಿರಂಗವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಏಪ್ರಿಲ್‌ 26ರಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದ ಆರೋಗ್ಯ ಇಲಾಖೆಯು ಏಪ್ರಿಲ್‌ 1ರಿಂದ ಏಪ್ರಿಲ್‌ 26ರವರೆಗೆ 8 ಶಂಕಿತ ಸಾವಿನ ಪ್ರಕರಣ ವರದಿಯಾಗಿದ್ದು, ಈ ಅವಧಿಯಲ್ಲಿ ಎಚ್‌1ಎನ್‌1 ಸೋಂಕಿನಿಂದ ಯಾರೊಬ್ಬರೂ ಮೃತಪಟ್ಟಿರುವುದು ಖಚಿತವಾಗಿಲ್ಲ. ಹೀಗಾಗಿ ಏಪ್ರಿಲ್‌ 26ರ ವೇಳೆಗೆ 39 ಮಂದಿ ಮಾತ್ರ ಎಚ್‌1ಎನ್‌1 ಸೋಂಕಿನಿಂದ ಮೃತಪಟ್ಟಿದ್ದಾಗಿ ಹೇಳಿತ್ತು. ಇದೀಗ ಮೇ 4 ರಂದು ನಡೆದಿರುವ ಮರಣ ಲೆಕ್ಕಪರಿಶೋಧನಾ ಸಮಿತಿ ಸಭೆಯಲ್ಲಿ ಸೋಂಕಿನಿಂದ ಒಟ್ಟು 56 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಏಪ್ರಿಲ್‌ ಕೊನೆಯ ವಾರದಿಂದ 10 ದಿನಗಳ ಅವಧಿಯಲ್ಲೇ 17 ಮಂದಿ ಮೃತಪಟ್ಟಿರುವುದು ಇಲಾಖೆ ಒದಗಿಸಿರುವ ಅಂಕಿ-ಅಂಶಗಳಿಂದ ವ್ಯಕ್ತವಾಗುತ್ತಿದೆ.

ಇನ್ನು ಮೇ 4ರಿಂದ ಮೇ 15ರ ವರೆಗೆ ವರದಿಯಾಗಿರುವ ಪ್ರಕರಣಗಳು ಹಾಗೂ ಶಂಕಿತ ಸಾವಿನ ಪ್ರಕರಣಗಳ ಬಗ್ಗೆ ಮೇ 16ರಂದು ಗುರುವಾರ ಮತ್ತೆ ಸಮಿತಿ ಸಭೆ ಸೇರಲಿದೆ. ಈ ವೇಳೆ ಕಳೆದ ಎರಡು ವಾರಗಳ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಯಲಿದ್ದು, ಅದರಲ್ಲಿ ಮತ್ತಷ್ಟುಸಾವಿನ ಪ್ರಕರಣ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

1523 ಪ್ರಕರಣ ದೃಢ:

ಆರೋಗ್ಯ ಇಲಾಖೆಯ ನೂತನ ಅಂಕಿ-ಅಂಶದ ಪ್ರಕಾರ ಜನವರಿ 1ರಿಂದ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆ 56ಕ್ಕೆ ಏರಿದೆ. ಮೇ 6ರ ವೇಳೆಗೆ ಎಚ್‌1ಎನ್‌1 ವೈರಸ್‌ ಸೋಂಕಿತರ ಪ್ರಮಾಣ 1523ಕ್ಕೆ ಏರಿಕೆಯಾಗಿದೆ.

ಏಪ್ರಿಲ್‌ ಕೊನೆಯ ವಾರದಿಂದ ಮೇ ಮೊದಲ ವಾರದ ವೇಳೆಗೆ ದಾವಣಗೆರೆಯಲ್ಲಿ 5 ಸಾವು ವರದಿಯಾಗಿದ್ದು, ಈ ಮೂಲಕ ದಾವಣಗೆರೆಯಲ್ಲಿ ಎಚ್‌1ಎನ್‌1ಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದಲ್ಲದೆ ಚಿತ್ರದುರ್ಗ 2, ಚಿಕ್ಕಬಳ್ಳಾಪುರ 1, ಬೆಂಗಳೂರು ಗ್ರಾಮಾಂತರದಲ್ಲಿ 2 ಸಾವು ಈ ಅವಧಿಯಲ್ಲಿ ದೃಢಪಟ್ಟಿವೆ.

ಒಟ್ಟು ಪ್ರಕರಣಗಳ ಪೈಕಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ 323 ಪ್ರಕರಣ ದೃಢಪಟ್ಟಿದ್ದು, ಜನವರಿಯಿಂದ ಈವರೆಗೆ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಶಿವಮೊಗ್ಗದಲ್ಲಿ 144 (6 ಸಾವು), ಮೈಸೂರು 124 (4 ಸಾವು), ದಾವಣಗೆರೆ 71 (10 ಸಾವು), ಉತ್ತರ ಕನ್ನಡ 28 (5 ಸಾವು), ಚಿತ್ರದುರ್ಗ 49 (6 ಸಾವು), ಹಾಸನ 46 (3 ಸಾವು), ತುಮಕೂರು 16 (3 ಸಾವು), ಚಿಕ್ಕಬಳ್ಳಾಪುರ 6 (3 ಸಾವು), ಬೀದರ್‌ 4 (2 ಸಾವು), ಹಾವೇರಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ 1 ಸಾವು ಸೇರಿದಂತೆ 56 ಮಂದಿ ಎಚ್‌1ಎನ್‌1ಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಶಂಕಿತ 5,911 ಮಂದಿಯ ಸ್ವಾ್ಯಬ್‌ (ಗಂಟಲಿನ ದ್ರವ) ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 1,523 ಮಂದಿಗೆ ಎಚ್‌1ಎನ್‌1 ಇರುವುದು ದೃಢಪಟ್ಟಿದ್ದು, 56 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ (2018ರಲ್ಲಿ) ಈ ಅವಧಿಗೆ ರಾಜ್ಯಾದ್ಯಂತ ಕೇವಲ 16 ಪ್ರಕರಣಗಳು ವರದಿಯಾಗಿದ್ದು, ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಈ ಬಾರಿ 56 ಮಂದಿ ಮೃತಪಟ್ಟಿರುವುದು ಆತಂಕ ಸೃಷ್ಟಿಸಿದೆ.

ಇಲಾಖೆಯಿಂದ ಅಗತ್ಯ ವ್ಯವಸ್ಥೆ:

ಎಚ್‌1ಎನ್‌1ಗೆ ಅಗತ್ಯವಾಗಿರುವ ಔಷಧ ಪೂರೈಕೆಗೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಈವರೆಗೆ 64,126 ಟಾಮಿಫä್ಲ ಔಷಧಿ ನೀಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಸೇರ್ಪಡೆ ಮಾಡಿ ಚಿಕಿತ್ಸೆ ನೀಡಲು ವೆಂಟಿಲೇಟರ್‌ ಅಳವಡಿಸಿದ 5 ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

ಎಚ್‌1ಎನ್‌1 ಬಗ್ಗೆ ದೃಢಪಡಿಸಿಕೊಳ್ಳಲು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆ, ಮಣಿಪಾಲ್‌ ಆಸ್ಪತ್ರೆ, ನಾರಾಯಣ ಹೆಲ್ತ್‌, ಏರ್‌ಫೋರ್ಸ್‌ ಕಮಾಂಡ್‌ ಆಸ್ಪತ್ರೆ ಮತ್ತು ಉಡುಪಿಯ ಮಣಿಪಾಲ್‌ ಆಸ್ಪತ್ರೆಯಲ್ಲಿ ಪ್ರಯೋಗಾಲಯಗಳನ್ನು ತೆರೆಯಲಾಗಿದ್ದು, ಶಂಕಿತರ ಸ್ವಾ್ಯಬ್‌ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳಿಸಿಕೊಡುವ ಮೂಲಕ ರೋಗ ಇರುವುದನ್ನು ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಇಲಾಖೆ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರೋಗ ಲಕ್ಷಣ ಏನು?  ಮುನ್ನೆಚ್ಚರಿಕೆ ಹೇಗೆ?

ಹಂದಿಜ್ವರ ಸೋಂಕಿತರಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆ, ತೀವ್ರವಾದ ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮುಂಜಾಗ್ರತೆಯಾಗಿ ಸೋಂಕು ಪೀಡತರಿಂದ ದೂರವಿರಬೇಕು. ಶಂಕಿತ ರೋಗಿಯನ್ನು ಪ್ರತ್ಯೇಕವಾಗಿ ಆರೈಕೆ ಮಾಡಬೇಕು. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರಗಳನ್ನು ಬಳಸಬೇಕು. ಪೌಷ್ಟಿಕ ಹಾಗೂ ಶುಚಿಯಾದ ಆಹಾರ ಸೇವಿಸಬೇಕು. ಚೆನ್ನಾಗಿ ನಿದ್ದೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಸೀನುವುದು ಮಾಡಬಾರದು. ಮನೆ ಹಾಗೂ ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು.

ಸರ್ಕಾರದ ಅಂಕಿ-ಅಂಶದಲ್ಲಿ ಗೊಂದಲ

ಆರೋಗ್ಯ ಇಲಾಖೆಯು ಎಚ್‌1ಎನ್‌1 ಕಾಯಿಲೆಯಿಂದ ಮೃತಪಟ್ಟಿರುವವರ ಸಂಖ್ಯೆಯಲ್ಲಿ ಪ್ರತಿ ಬಾರಿಯೂ ಗೊಂದಲ ಸೃಷ್ಟಿಸುತ್ತಿದೆ. ಏಪ್ರಿಲ್‌ 1ರಿಂದ 26ರವರೆಗೆ ಯಾವುದೇ ಸಾವು ಉಂಟಾಗಿಲ್ಲ, ಫೆಬ್ರುವರಿ ಹಾಗೂ ಮಾಚ್‌ರ್‍ ತಿಂಗಳಲ್ಲಿ 39 ಸಾವು ಖಚಿತಪಟ್ಟಿದ್ದು, ಏಪ್ರಿಲ್‌ನಲ್ಲಿ 8 ಶಂಕಿತ ಪ್ರಕರಣಗಳು ವರದಿಯಾಗಿದ್ದರೂ ಯವುದೇ ಸಾವು ಸಂಭವಿಸಿಲ್ಲ, ಹೀಗಾಗಿ ಸಾವಿನ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದು ಆರೋಗ್ಯ ಇಲಾಖೆ ಏಪ್ರಿಲ್‌ 26ರಂದು ಹೇಳಿಕೆ ನೀಡಿತ್ತು. ಇದೀಗ ಮೇ 4ಕ್ಕೆ ದೃಢಪಟ್ಟಸಾವಿನ ಸಂಖ್ಯೆ 56ಕ್ಕೆ ಏರಿಕೆಯಾಗಿದೆ ಎಂದು ವರದಿ ನೀಡಿದೆ. ಆದರೆ, ಇದು ಏಪ್ರಿಲ್‌ 26ರಿಂದ ಮೇ 4ರ ನಡುವೆಯೇ ಆಗಿರಬೇಕು ಎಂದೇನೂ ಅಲ್ಲ. ಕೆಲವೊಂದು ಪ್ರಕರಣ ತಡವಾಗಿ ವರದಿಯಾಗಿರಬಹುದು. ಒಟ್ಟು ಸಾವು 56ಕ್ಕೆ ಏರಿಕೆಯಾಗಿದ್ದು, ಇವು ಇದೇ ವಾರದಲ್ಲಿ ಆಗಿವೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ತುಸು ಹೆಚ್ಚು ಎಚ್‌1ಎನ್‌1 ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ನಾಲ್ಕು ತಿಂಗಳಲ್ಲಿ ಎಚ್‌1ಎನ್‌1ಗೆ 56 ಮಂದಿ ಬಲಿಯಾಗಿರುವುದಾಗಿ ಮೇ 4ರಂದು ನಡೆದ ಡೆತ್‌ ಆಡಿಟ್‌ ಕಮಿಟಿ ಸಭೆಯಲ್ಲಿ ಖಚಿತಗೊಂಡಿದೆ. ಗುರುವಾರ ಮತ್ತೆ ಡೆತ್‌ ಆಡಿಟ್‌ ಸಮಿತಿ ಸಭೆ ನಡೆಯಲಿದ್ದು, ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಮತ್ತಷ್ಟುಹೆಚ್ಚಾಗುವ ಸಾಧ್ಯತೆ ಇದೆ. ಕಾಯಿಲೆ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ.

- ಡಾ.ಸಜ್ಜನ್‌ ಶೆಟ್ಟಿ, ಜಂಟಿ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

Follow Us:
Download App:
  • android
  • ios