ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ| ಪ್ರಬಲ ಹಿಂದುಳಿದ ವರ್ಗದ ನಾಯಕನಿಗೆ ಪಟ್ಟ| ಉತ್ತರ ಪ್ರದೇಶ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್| ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದ ರಾಜ್ಯದ ಒಬಿಸಿ ಸಮುದಾಯ|
ನವದೆಹಲಿ(ಜು.16): ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
ಈ ಮೊದಲು ರಾಜ್ಯಾಧ್ಯಕ್ಷರಾಗಿದ್ದ ಮಹೇಂದ್ರ ನಾಥ್ ಪಾಂಡೆ ಪ್ರಧಾನಿ ಮೋದಿ ಸಂಪುಟ ಸೇರಿದ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗದ ನಾಯಕರಾದ ಸ್ವತಂತ್ರ ದೇವ್ ಸಿಂಗ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಬಿಸಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಬಲ ಕುರ್ಮಿ ಸಮುದಾಯಕ್ಕೆ ಸೇರಿದ ಸ್ವತಂತ್ರ ದೇವ್ ಸಿಂಗ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ಸ್ವತಂತ್ರ ದೇವ್ ಸಿಂಗ್, ರಾಜ್ಯದ ಜನಪ್ರಿಯ ಹಿಂದುಳಿದ ವರ್ಗದ ನಾಯಕರಲ್ಲಿ ಮುಂಚೂಣಿಯಲ್ಲಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಚಂದ್ರಕಾಂತ್ ಪಾಟೀಲ್ ಅವರನ್ನು ನೇಮಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ.
