ಉಡುಪಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟೆಯ ಜಲಾಶಯದಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಭಾನುವಾರದಿಂದಲೇ ಜಲಾಶಯದಿಂದ ನೀರು ಎತ್ತುವ ಕಾರ್ಯವನ್ನು ನಿಲ್ಲಿಸಲಾಗಿದೆ. 

ಇದರಿಂದ ಉಡುಪಿ ನಗರವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಇನ್ನಷ್ಟು ಬಿಗಡಾಯಿಸಿದೆ. ಅನಿವಾರ್ಯವಾಗಿ ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾಗಿದೆ. ಕಳೆದ ವರ್ಷ ಇದೇ ದಿನ ಈ ಜಲಾಶಯದಲ್ಲಿ 3.14 ಮೀಟರ್‌ ನೀರಿತ್ತು. ಇದಕ್ಕೆ ಕಾರಣ ಏಪ್ರಿಲ್‌ ತಿಂಗಳಲ್ಲಿಯೇ ಈ ಭಾಗದಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ಮಳೆಯಾಗಿಲ್ಲ. 

ಆದ್ದರಿಂದ ಭಾನುವಾರ ಜಲಾಶಯದಲ್ಲಿ ನೀರಿನ ಮಟ್ಟ0.85 ಮೀಟರಿಗಿಳಿದಿದೆ. ಅಂದರೆ ನೀರಿನ ಮಟ್ಟಡೆಡ್‌ ಸ್ಟೋರೇಜ್‌ ತಲುಪಿದೆ. ಸೋಮವಾರದಿಂದ ಹೂಳೆತ್ತುವ ಕಾರ್ಯ ಆರಂಭವಾಗಲಿದೆ. ಆದರೆ 2 ದಿನ ನೀರು ಪೂರೈಕೆ ಇರುವುದಿಲ್ಲ ಎಂದು ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್‌ ತಿಳಿಸಿದ್ದಾರೆ.