Asianet Suvarna News Asianet Suvarna News

ಮುಂದಿನ ಚುನಾವಣಾ ಸ್ಪರ್ಧೆಗೆ ಡಜನ್ ಸ್ವಾಮೀಜಿಗಳು ಸಜ್ಜು

ಮಠಾಧೀಶರು ರಾಜಕೀಯಕ್ಕೆ ಬರುವುದು ದೇಶದಲ್ಲಿ ಹೊಸದೇನಲ್ಲ. 2018 ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೂ ಈ ಪ್ರಯೋಗ ಆರಂಭವಾಗುವ ಲಕ್ಷಣಗಳಿದ್ದು, ಡಜನ್‌ಗೂ ಹೆಚ್ಚು ಮಠಾಧೀಶರು ಟಿಕೆಟ್‌ಗಾಗಿ ಪಕ್ಷಗಳ ಬಾಗಿಲು ತಟ್ಟುತ್ತಿದ್ದಾರೆ.

Swamijis Contest In Next Karnataka Election

ಬೆಂಗಳೂರು (ಜ.23): ಮಠಾಧೀಶರು ರಾಜಕೀಯಕ್ಕೆ ಬರುವುದು ದೇಶದಲ್ಲಿ ಹೊಸದೇನಲ್ಲ. 2018 ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೂ ಈ ಪ್ರಯೋಗ ಆರಂಭವಾಗುವ ಲಕ್ಷಣಗಳಿದ್ದು, ಡಜನ್‌ಗೂ ಹೆಚ್ಚು ಮಠಾಧೀಶರು ಟಿಕೆಟ್‌ಗಾಗಿ ಪಕ್ಷಗಳ ಬಾಗಿಲು ತಟ್ಟುತ್ತಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಗಾದಿಗೆ ಯೋಗಿ ಆದಿತ್ಯನಾಥ ಏರುತ್ತಿದ್ದಂತೆ ಮತ್ತು ಆಗಾಗ ಅವರು ಕರ್ನಾಟಕಕ್ಕೆ ಬಂದು ಮಾಡುತ್ತಿರುವ ಉಗ್ರ ಭಾಷಣದಿಂದ ಪ್ರಭಾವಿತರಾಗಿರುವ ಹಲವು ವೀರಶೈವ, ಲಿಂಗಾಯತ ಮಠಾಧೀಶರು ರಾಜಕೀಯ ಪ್ರವೇಶಕ್ಕೆ ಹಂಬಲಿಸುತ್ತಿದ್ದಾರೆ.

ಟಿಕೆಟ್ ಆಕಾಂಕ್ಷಿ ಮಠಾಧೀಶರು: ಬಾಗಲಕೋಟೆ ರಾಮಾರೂಢ ಮಠದ ಶ್ರೀ ಪರಮರಾಮಾರೂಢ ಸ್ವಾಮಿಗಳು ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಪರಮಾಪ್ತ ಮುರುಗೇಶ್ ನಿರಾಣಿ ಅವರನ್ನು ಬಿಟ್ಟುಕೊಡಲಾಗದೆ ಶ್ರೀಗಳಿಗೆ ‘ಪಕ್ಷಕ್ಕೆ ನಿಮ್ಮ ಆಶೀರ್ವಾದ ಇರಲಿ, ಟಿಕೆಟ್ ಸಾಧ್ಯವಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ್ದರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ತಮ್ಮ ಮಠಕ್ಕೆ ಕರೆಸಿಕೊಂಡು ಟಿಕೆಟ್ ನೀಡಿದರೆ ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಧಾರವಾಡ ತಾಲೂಕು ಮನಗುಂಡಿಯ ಬಸವ ಮಹಾಮನೆಯ ಶರಣರಾದ ಶ್ರೀ ಬಸವಾನಂದರು ಕಲಘಟಗಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಇವರು ವೀರಶೈವ ಗುರುಪರಂಪರೆ, ವಿಎಚ್‌ಪಿ, ಬಜರಂಗದಳ, ಆರೆಸ್ಸೆಸ್, ಬಿಜೆಪಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಲು ಗುಜರಾತ್‌ಗೆ ಹೋಗಿ ಮೋದಿಗೆ ಮನವಿ ಮಾಡಿದ್ದರು.

ಕಳೆದ ವರ್ಷವೂ ದೆಹಲಿಗೆ ಹೋಗಿ ಮೋದಿ ಅವರನ್ನು ಕಂಡಿರುವುದು ಜಿಲ್ಲೆಯ ಬಿಜೆಪಿಗರಲ್ಲಿ ತಳಮಳ ಹುಟ್ಟಿಸಿದೆ. ಕುಂದಗೋಳದ ಪಂಚಗೃಹ ಹಿರೇಮಠದ ಶಿಥಿಕಂಠೇಶ್ವರ ಶ್ರೀಗಳು ಕ್ಷೇತ್ರಕ್ಕೆ ತಮ್ಮನ್ನು ಅಭ್ಯರ್ಥಿ ಮಾಡುವಂತೆ ಬಿಜೆಪಿ ಮುಖಂಡರಿಗೆ ಕೋರಿದ್ದಾರೆ.

ರಾಜಕೀಯದತ್ತ ಶ್ರೀಗಳ ಚಿತ್ತ: ಮಠಾಧೀಶರನ್ನು ಓಲೈಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್, ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮಿಗಳನ್ನು ಅಥಣಿ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸಿದೆ. ಅದಕ್ಕೆ ಶ್ರೀಗಳೂ ಒಪ್ಪಿಗೆ ನೀಡಿದ್ದಾರಂತೆ.

ಹಿಂದೆ ವಿಜಯ ಸಂಕೇಶ್ವರ ‘ಕನ್ನಡನಾಡು ಪಕ್ಷ’ ಕಟ್ಟಿದಾಗ ಬಸವಧರ್ಮ ಪೀಠದ ಮಾತೆ ಮಹಾದೇವಿ, ಮನಸೂರು ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಕಣಕ್ಕಿಳಿದು ಹೀನಾಯ ಸೋಲುಂಡಿದ್ದರು. ಈಗ ಬಸವರಾಜ ದೇವರು ಸಿಎಂ ಸಿದ್ದರಾಮಯ್ಯ ಅವರಿಗೆ ಪರಮಾಪ್ತರು. ಮೇಲಾಗಿ ಕುರುಬ ಸಮಾಜದವರು.

ಬಾದಾಮಿಯಲ್ಲಿ ಉಂಟಾಗಿರುವ ಆಕಾಂಕ್ಷಿಗಳ ಗದ್ದಲದಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಈ ಶ್ರೀಗಳೇ ಸೂಕ್ತ ಎನ್ನುವುದು ಮತ್ತು ಪ್ರತ್ಯೇಕ ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿರುವ ಮಾತೆ ಮಹಾದೇವಿ ಕೂಡ ಮತ್ತೊಮ್ಮೆ ಕಣಕ್ಕಿಳಿಯುವ ಹುಮ್ಮಸ್ಸು ತೋರಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ರೈತರಿಗಾಗಿ ಸನ್ಯಾಸ ದೀಕ್ಷೆ ತೆಗೆದುಕೊಂಡಿರುವ ಮಹದಾಯಿ ಹೋರಾಟಗಾರ ವೀರೇಶ್ ಸೊಬರದಮಠ ಕೂಡ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಖರ ಹಿಂದುತ್ವದ ಭಾಷಣದಿಂದ ಸುದ್ದಿಯಾಗುವ ಗುರುಪುರದ ವಜ್ರದೇಹಿಮಠದ ರಾಜಶೇಖರಾನಂದ ಸ್ವಾಮೀಜಿ ಕೂಡ ಈಗಾಗಲೇ ಚುನಾವಣೆಗೆ ಸ್ಪರ್ಧಿಸುವ ಒಲವು ಪ್ರದರ್ಶಿಸಿದ್ದಾರೆ.

Follow Us:
Download App:
  • android
  • ios