Asianet Suvarna News Asianet Suvarna News

ಟಾಯ್ಲೆಟ್ ಕ್ರಾಂತಿ ನಮ್ಮ ದೇಶವನ್ನು ಬದಲಿಸಿದ್ದು ಹೇಗೆ?

ದೇಶದ ಸಾರ್ವಜನಿಕ ಆರೋಗ್ಯದ ಗೇಮ್ ಚೇಂಜರ್ ಎನಿಸಿಕೊಂಡಿರುವ ಸ್ವಚ್ಛ ಭಾರತ ಅಭಿಯಾನ ಹಲವು ದೇಶಗಳಿಗೆ ಸ್ಫೂರ್ತಿಯಾಗಿದೆ. ಇದರ ಕುರಿತು ಮಾಹಿತಿ ಹಂಚಿಕೊಳ್ಳಲು 50 ಸಚಿವರು ವಿವಿಧ ದೇಶಗಳಿಗೆ ಹೊರಟಿದ್ದಾರೆ. 

Swachh Bharat Campaign how to change our country? Finance Minister Arun Jaitley explanation here
Author
Bengaluru, First Published Sep 21, 2018, 11:55 AM IST
  • Facebook
  • Twitter
  • Whatsapp

ಬೆಂಗಳೂರು (ಸೆ. 20): 1961 ರಲ್ಲಿ ಜಾನ್ ಎಫ್ ಕೆನಡಿ ಈ ದಶಕದ ಕೊನೆಯಲ್ಲಿ ಅಮೆರಿಕ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಲಿದೆ ಎಂದಾಗ ಯಾರಿಗೂ ಅದು ಸಾಧ್ಯ ಎಂಬ ನಂಬಿಕೆ ಇರಲಿಲ್ಲ. ಆದರೆ 8 ವರ್ಷಗಳ ಬಳಿಕ ಅದು ಸಾಧ್ಯವಾಯಿತು.

ಹಾಗೇ 2014 ರಲ್ಲಿ ನರೇಂದ್ರ ಮೋದಿ 2019 ರ ವೇಳೆಗೆ ಭಾರತ ಬಯಲು ಶೌಚಮುಕ್ತವಾಗುತ್ತದೆ ಎಂದಾಗಲೂ ಯಾರಿಗೂ ಅದು ಸಾಧ್ಯ ಎಂದೆನಿಸಿರಲಿಲ್ಲ. ಆದರೆ ಕೇವಲ 4 ವರ್ಷದಲ್ಲಿ ಭಾರತ ಬಯಲುಶೌಚ ಮುಕ್ತವಾಗುವ ಸನಿಹದಲ್ಲಿದೆ. ಕೆಲವೊಮ್ಮೆ ಅಸಾಧ್ಯವೆನಿಸುವಂತಹ ದಿಟ್ಟ ಹೆಜ್ಜೆಗಳು ಪ್ರಬಲ ನಾಯಕನಿದ್ದಾಗ ಸಾಧ್ಯವಾಗುತ್ತವೆ. ಜನರಿಗೆ ಭದ್ರತೆಯ ಭಾವ ಮೂಡಿಸುತ್ತವೆ.

ಅದು ಅವರು ದೊಡ್ಡ ದೊಡ್ಡ ಯೋಚನೆಗಳನ್ನು ಮಾಡುವಂತೆ, ದೊಡ್ಡ ಗುರಿ ಹೊಂದುವಂತೆ ಮಾಡುತ್ತವೆ. ಯಶಸ್ಸಿನ ಕಲ್ಪನೆಯ ಚಿತ್ರವನ್ನು ಮನಸ್ಸಿನಲ್ಲಿಯೇ ಬರೆದು ಮುನ್ನುಗ್ಗಿಸುತ್ತವೆ. ಜೊತೆಗೆ ಪ್ರತಿಯೊಬ್ಬರೂ ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದಾಗ ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸಾಧನೆ ಸಾಧ್ಯವಾಗುತ್ತದೆ. ಟಾಯ್ಲೆಟ್ ಪರಿಕಲ್ಪನೆಯೇ ಇರಲಿಲ್ಲ ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ಅಂದರೆ 2014 ರ ವರೆಗೂ ಸುಮಾರು ಅರ್ಧದಷ್ಟು ಭಾರತ ಬಯಲು ಶೌಚವನ್ನೇ ಬಳಸುತ್ತಿತ್ತು!

ಆಗ ದೇಶದ ಕೋಟ್ಯಂತರ ಜನರಿಗೆ ಟಾಯ್ಲೆಟ್ ಬೇಕು ಎಂಬ ಪರಿಕಲ್ಪನೆಯೇ ಇರಲಿಲ್ಲ. ಹಲವು ಮಹಿಳೆಯರಿಗೆ ಶೌಚಾಲಯ ಬೇಕು ಎಂಬ ಆಸೆ ಇತ್ತು. ಆದರೆ ಅದರ ಅವಶ್ಯಕತೆಯ ಬಗ್ಗೆ ಬಹಿರಂಗವಾಗಿ, ಬಲವಾಗಿ ಧ್ವನಿ ಎತ್ತಲು ಸಾಧ್ಯವಾಗಿರಲಿಲ್ಲ. ಅನಂತರ ಮನೆಗೆ ಟೀವಿ ತರಲೆಂದೋ, ಮೋಟರ್‌ಸೈಕಲ್ ತರಲೆಂದೋ ಆ ಕನಸನ್ನು ತ್ಯಾಗ ಮಾಡುತ್ತಿದ್ದರು. ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ನಿಂತು ಬಯಲು ಶೌಚದ ವಿರುದ್ಧ ಮಾತನಾಡುವವರೆಗೂ ಯಾರೊಬ್ಬರೂ ಈ ಬಗ್ಗೆ ಗಂಭೀರವಾಗಿ ಧ್ವನಿ ಎತ್ತಲಿಲ್ಲ.

ಪ್ರಧಾನಿ ಈಗಲೂ ಸಂಕೋಚವಿಲ್ಲದೆ ಸಾರ್ವಜನಿಕ ಸಭೆಗಳಲ್ಲಿ ಟಾಯ್ಲೆಟ್‌ಗಳ ಬಗ್ಗೆ ಮಾತನಾಡುತ್ತಾರೆ. ಏಕೆಂದರೆ ಶೌಚಾಲಯಗಳು ನಮಗೆ ಅತ್ಯಗತ್ಯ. ಅದರ ಕುರಿತು ಕೇವಲ ಸ್ಥಳೀಯವಾಗಿ ಮಾತ್ರವಲ್ಲ, ರಾಷ್ಟ್ರೀಯವಾಗಿಯೂ ಚರ್ಚಿಸುವ ಅಗತ್ಯವಿದೆ. ಭಾರತದ ಈ ಸ್ವಚ್ಛ ಆಂದೋಲನ ಅಂತಿಮವಾಗಿ ಬಯಲು ಶೌಚಮುಕ್ತವಾಗುವ ಮೂಲಕ ಯಶಸ್ವಿಯಾಗಲಿದೆ.

ನೈರ್ಮಲ್ಯವಿಲ್ಲದಿದ್ದರೆ ಸಮಸ್ಯೆಯೇನು?

ನಾನೊಬ್ಬ ವಿತ್ತ ಸಚಿವನಾಗಿ ಈ ಕುರಿತ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿನ ಅಪೂರ್ವ ಕ್ಷಣಗಳಲ್ಲಿ ಭಾಗಿಯಾಗಿದ್ದೇನೆ. ನಮ್ಮ ಸರ್ಕಾರಕ್ಕೆ ದೇಶದ ಅಭಿವೃದ್ಧಿಯೊಂದಿಗೆ ನೈರ್ಮಲ್ಯ ಕೂಡ ಮುಖ್ಯ. ಈ ಮಹತ್ವಾಕಾಂಕ್ಷೆಯ ಗುರಿ ಸಾಧನೆಗಾಗಿ ಸಾಕಷ್ಟು ಶ್ರಮಪಡಬೇಕಾಯಿತು. ಜಗತ್ತಿನ ಅತಿ ವೇಗವಾಗಿ ಸಾಗುವ ಆರ್ಥಿಕತೆಗಳಲ್ಲಿ ಭಾರತ ಕೂಡ ಒಂದು. ಹಾಗಾಗಿ ದೇಶದ ಜನರ ಜೀವನ ಗುಣಮಟ್ಟವನ್ನು, ಅದರಲ್ಲೂ ಗ್ರಾಮೀಣ ಭಾಗದ ಜನರ ಜೀವನ ಗುಣಮಟ್ಟವನ್ನು ಎತ್ತರಿಸುವ ಬದ್ಧತೆ ಅವಶ್ಯಕ. ರಸ್ತೆ ನಿರ್ಮಾಣ, ವಿದ್ಯುತ್, ವಸತಿ ಜೊತೆಗೆ ನೈರ್ಮಲ್ಯ ಯೋಜನೆಗಳು ಸರ್ಕಾರದ ಆದ್ಯತೆಯ ಅವಿಭಾಜ್ಯ ಅಂಗ.

ಕಳಪೆ ನೈರ್ಮಲ್ಯವು ದೇಶದ ಮಹಿಳೆಯರ ಘನತೆ ಮತ್ತು ಗೌರವವನ್ನು ಕುಗ್ಗಿಸುತ್ತದೆ. ಅತಿಸಾರ ಭೇದಿ ಮುಂತಾದ ಕಾಯಿಲೆಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತವೆ. ಇದು ದೇಶದ ಭವಿಷ್ಯದ ಉತ್ಪಾದಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ.

ಟಾಯ್ಲೆಟ್ಟೇ ಅಭಿವೃದ್ಧಿಯ ಅಜೆಂಡಾ!

ಹಾಗಾಗಿ ಭಾರತ ಈ ಉದಾತ್ತ ಗುರಿ ಸಾಧನೆಗಾಗಿ ಬಜೆಟ್‌ನಲ್ಲಿ 13,600 ಕೋಟಿ ಹಣ ಮೀಸಲಿಟ್ಟಿದೆ. ಈ ನಿಧಿಯಿಂದ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಮಹಿಳಾ ಪ್ರಧಾನ ಕುಟುಂಬಗಳು, ಸಣ್ಣ ಭೂರಹಿತ ಕೃಷಿ ಕಾರ್ಮಿಕರನ್ನೊಳಗೊಂಡ ಸುಮಾರು 8.5 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ತಲಾ 12,000 ರು. ನೀಡಿದೆ. ಈ ಅಭೂತಪೂರ್ವ ಕಾರ್ಯಕ್ರಮದ ಮೂಲಕ ನಮ್ಮ ಪ್ರಧಾನಿ ಟಾಯ್ಲೆಟ್ ಮುಂತಾದ ‘ಕೆಟ್ಟ ಪದ’ಗಳನ್ನೇ ದೇಶದ ಅಭಿವೃದ್ಧಿಯ ಅಜೆಂಡಾವಾಗಿ ಬಳಸಿಕೊಂಡಿದ್ದಾರೆ.

ಎಲ್ಲೆಡೆ ಶೌಚಾಲಯ ಕ್ರಾಂತಿ

ಕಳೆದ 4 ವರ್ಷದಲ್ಲಿ ಸುಮಾರು 50 ಕೋಟಿ ಜನರು ಬಯಲು ಶೌಚದಿಂದ ಹೊರಬಂದಿದ್ದಾರೆ. 2014 ರಲ್ಲಿ ಶೇ.39 ರಷ್ಟಿದ್ದ ಗ್ರಾಮೀಣ ಭಾರತದ ನೈರ್ಮಲ್ಯ ಪ್ರಮಾಣ ಸದ್ಯ ಶೇ.93 ಕ್ಕೆ ಏರಿಕೆಯಾಗಿದೆ. ನೈರ್ಮಲ್ಯವೆನ್ನುವುದು ಸಾರ್ವತ್ರಿಕವಾಗಿದೆ. ಅದರಲ್ಲೂ ಟಾಯ್ಲೆಟ್ ಎಂಬ ಪದ ಬಳಕೆ ನಿಷೇಧಾರ್ಥಕ ವಲಯದಿಂದ ಹೊರಬಂದಿದೆ.

ಇಂದು ಮಾಧ್ಯಮಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಪ್ರತಿಯೊಬ್ಬರೂ ಈ ಬಗ್ಗೆ ಮಾತನಾಡುತ್ತಾರೆ. ಬಾಲಿವುಡ್ ಕೂಡ ಟಾಯ್ಲೆಟ್‌ನ ಪ್ರಾಮುಖ್ಯತೆ ಬಗ್ಗೆ ಮಾತನಾಡುತ್ತಿದೆ! ಭಾರತದ ಹಲವು ಪ್ರದೇಶಗಳಲ್ಲಿ ಟಾಯ್ಲೆಟ್‌ಗಳನ್ನು ‘ಇಜ್ಜತ್ ಘರ್’( ಮರ್ಯಾದೆಯ ಮನೆ) ಎಂದೇ ಕರೆಯಲಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯು ‘ಭಾರತ 2019 ರ ಒಳಗಾಗಿ ದೇಶವನ್ನು ಬಯಲು ಶೌಚಮುಕ್ತವಾಗಿಸುವ ಮೂಲಕ ಸುಮಾರು 3 ಲಕ್ಷ ಜೀವ ಉಳಿಸುತ್ತಿದೆ’ ಎಂದು ಹೇಳಿದೆ. ಯುನಿಸೆಫ್ ಕಳೆದ ವರ್ಷ ಭಾರತ ನೈರ್ಮಲ್ಯಕ್ಕೆ ಮೀಸಲಿಟ್ಟಿರುವ ಹಣವು ಶೇ.400 ರಷ್ಟು ಹೆಚ್ಚಿದೆ ಎಂದು ಅಂದಾಜಿಸಿದೆ.

ಭಾರತದ ಆರ್ಥಿಕ ಉತ್ಪಾದನೆ ಮತ್ತು ಸಾರ್ವಜನಿಕ ಆರೋಗ್ಯದ ಗೇಮ್ ಚೇಂಜರ್ ಎನಿಸಿಕೊಂಡಿರುವ ಸ್ವಚ್ಛ ಭಾರತ ಅಭಿಯಾನವನ್ನು ಅಂತಾರಾಷ್ಟ್ರೀಯ ತಜ್ಞರೂ ಶ್ಲಾಘಿಸಿದ್ದಾರೆ.

ಸ್ವಚ್ಚ ಕ್ರಾಂತಿಗೆ ಭಾರತವೇ ನಾಯಕ!

ಬಯಲು ಶೌಚದ ವಿರುದ್ಧದ ಹೋರಾಟದಲ್ಲಿ ಸದ್ಯ ಭಾರತ ಜಾಗತಿಕ ನಾಯಕನಾಗಿದೆ. ಹಲವು ರಾಷ್ಟ್ರಗಳು ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನ ಮತ್ತು ಯಶಸ್ಸಿನಿಂದ ಪ್ರೇರಣೆಗೊಂಡು ತಮ್ಮ ರಾಷ್ಟ್ರದಲ್ಲೂ ಜಾರಿಗೆ ತರುತ್ತಿವೆ. ಇದೇ ಸೆ.29 ರಿಂದ ಅ.2 ರವರೆಗೆ ಮಹತ್ಮಾ ಗಾಂಧಿ ಅಂತಾರಾಷ್ಟ್ರೀಯ ನೈರ್ಮಲ್ಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತ ಸರ್ಕಾರ ಸುಮಾರು 50 ಸಚಿವರನ್ನು ವಿವಿಧ ದೇಶಗಳಿಗೆ ಕಳುಹಿಸಲಿದೆ.

ಅಲ್ಲಿ ಸ್ವಚ್ಛ ಭಾರತ ಅಭಿಯಾನದ ಸಾಧನೆಯ ಹಾದಿಯನ್ನು ಹಂಚಿಕೊಳ್ಳುವುದರ ಜೊತೆಗೆ ಬೇರೆ ದೇಶಗಳ ಸುಸ್ಥಿರ ನೈರ್ಮಲ್ಯದ ಗುಟ್ಟೇನು ಎಂದು ತಿಳಿದುಕೊಳ್ಳಲೂ ಈ ಸಮಾವೇಶ ಸಹಾಯಕವಾಗಲಿ. 

-ಅರುಣ್ ಜೇಟ್ಲಿ, 

ಕೇಂದ್ರ ಹಣಕಾಸು ಸಚಿವ 

Follow Us:
Download App:
  • android
  • ios