ಬೆಂಗಳೂರು (ಆ. 14):  ನೆರೆ ಸಂತ್ರಸ್ತರಿಗೆ ನೆರವಾಗುವಂತೆ ‘ಕನ್ನಡಪ್ರಭ- ಸುವರ್ಣ ನ್ಯೂಸ್‌’ ನೀಡಿದ ಕರೆಗೆ ಮಂಗಳವಾರ ಕೂಡ ನಾಡಿನ ಜನರಿಂದ ಉದಾರ ಸ್ಪಂದನೆ ದೊರೆತಿದ್ದು, ಆರನೇ ದಿನವೂ ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಒಟ್ಟು ಐದು ಟ್ರಕ್‌ ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ.

ಈ ಮೂಲಕ ಕಳೆದ ಒಂದು ವಾರದಿಂದ ಒಟ್ಟು 53 ಟ್ರಕ್‌ ಪರಿಹಾರ ಸಾಮಗ್ರಿಗಳನ್ನು ನೆರೆ ಪೀಡಿತ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ವಿವಿಧ ಪ್ರದೇಶಗಳಿಗೆ ತಲುಪಿಸುವ ಕೆಲಸವನ್ನು ಕನ್ನಡಪ್ರಭ ಹಾಗೂ ಸೋದರ ಸಂಸ್ಥೆ ಸುವರ್ಣ ನ್ಯೂಸ್‌ ಯಶಸ್ವಿಯಾಗಿ ನಿರ್ವಹಿಸಿದಂತಾಗಿದೆ. ಅಲ್ಲದೆ, ರಾಣೆಬೆನ್ನೂರು, ಹಾವೇರಿಯಲ್ಲಿ ಸುಮಾರು ಮೂರು ಟ್ರಕ್‌ನಷ್ಟುಮೇವು ಸಂಗ್ರಹವಾಗಿದ್ದು, ಅದನ್ನು ಬುಧವಾರ ಬೆಳಗ್ಗೆ ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ವಿತರಿಸಲಾಗುವುದು.

ಮಂಗಳವಾರ ಚಿಕ್ಕಬಳ್ಳಾಪುರದಿಂದ ಒಂದು ಟ್ರಕ್‌ನಷ್ಟುಪರಿಹಾರ ಸಾಮಗ್ರಿಗಳನ್ನು ಗದಗ ಜಿಲ್ಲೆಗೆ ಸಾಗಿಸಲಾಯಿತು. ಅಂತೆಯೇ ದಾವಣಗೆರೆಯಲ್ಲಿ ಸಂಗ್ರಹವಾಗಿದ್ದ ಒಂದು ಟ್ರಕ್‌ ಪರಿಹಾರ ಸಾಮಗ್ರಿಗಳನ್ನು ಯಲ್ಲಾಪುರ ಕ್ಷೇತ್ರಕ್ಕೆ, ಹಾವೇರಿಯಿಂದ ಒಂದು ಟ್ರಕ್‌ ಅನ್ನು ಗದಗ ಜಿಲ್ಲೆಗೆ ಕಳುಹಿಸಲಾಯಿತು. ಇನ್ನು, ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಸಂಗ್ರಹವಾಗಿದ್ದ ಪರಿಹಾರ ಸಾಮಗ್ರಿಗಳನ್ನು ಗದಗ ಮತ್ತು ಮುಂಡಗೋಡಿಗೆ ತಲಾ ಒಂದು ಟ್ರಕ್‌ ಕಳುಹಿಸಲಾಯಿತು.

ಅಸುರ ಸಂಹಾರ ಚಿತ್ರತಂಡವು ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನೊಂದಿಗೆ ಕೈಜೋಡಿಸಿದ್ದು, ಮಂಗಳವಾರ ಪರಿಹಾರ ಸಾಮಗ್ರಿಗಳನ್ನು ಟ್ರಕ್‌ಗಳಿಗೆ ತುಂಬಿಸಲು ಸಹಾಯ ಮಾಡಿತು. ಅದೇ ಟ್ರಕ್‌ನಲ್ಲಿ ತಂಡವು ಬೆಳಗಾವಿ ಭಾಗದ ನೆರೆ ಪೀಡಿತ ಪ್ರದೇಶ ಮುನವಳ್ಳಿಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ತೆರಳಿತು.

ಸೋಮವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಪರಿಹಾರ ಸಾಮಗ್ರಿಗಳನ್ನು ತುಂಬಿಕೊಂಡು ಹೊರಟಿದ್ದ 16 ಟ್ರಕ್‌ ಸಾಮಗ್ರಿಗಳನ್ನು ಹೊನ್ನಾವರ, ಯಲ್ಲಾಪುರ, ಶಿಗ್ಗಾವಿ, ಬಾಗಲಕೋಟೆ, ಬಾದಾಮಿ, ಚಿಕ್ಕೋಡಿ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಸಾಗಿಸಿ ಸಂತ್ರಸ್ತರಿಗೆ ಹಂಚಲಾಯಿತು.

ಸದ್ಯಕ್ಕೆ ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಸಾಮಗ್ರಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುವುದನ್ನು ಮಂಗಳವಾರಕ್ಕೆ ಅಂತ್ಯಗೊಳಿಸಲಾಗಿದೆ. ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ರಾಜ್ಯದ ಜನರ ಮಾನವೀಯತೆಗೆ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ಹೃದಯಪೂರ್ವಕ ಕೃತಜ್ಞತೆ ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತದೆ.