'ಸುವರ್ಣ ನ್ಯೂಸ್.ಕಾಂ' ಇಂಪ್ಯಾಕ್ಟ್: ಕಲಬುರಗಿಗೆ ರೈಲು ಓಡಿಸಲು ಸೂಚಿಸಿದ ಸಚಿವರು
ಕೊನೆಗೂ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು| ಸುರ್ಣನ್ಯೂಸ್.ಕಾಂ ಪ್ರಕಟಿಸಿದ ಸುದ್ದಿಗೆ ಸ್ಪಂದಿಸಿದ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ.
ಬೆಂಗಳೂರು, [ಆ.29]: ಗಣೇಶ ಚತುರ್ಥಿಗೆ ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸಲು ನೈಋತ್ಯ ರೈಲ್ವೆ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಸಂಚರಿಸಲಿದೆ.
ಇದಕ್ಕೂ ಮೊದಲು ಸುರೇಶ್ ಅಂಗಡಿಯವರು ಗಣೇಶ ಹಬ್ಬಕ್ಕೆ ಬೆಂಗಳೂರು-ಬೆಳಗಾವಿ ನಡುವೆ ಮಾತ್ರ ವಿಶೇಷ ರೈಲು ಬಿಡಿಸಿದ್ದರು. ಕೇವಲ ತಮ್ಮ ಜಿಲ್ಲೆಗೆ ರೈಲು ಓಡಿಸಿದ್ರೆ ಇನ್ನುಳಿದ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಯ ಜನರು ಗಣಪತಿ ಹಬ್ಬ ಆಚರಿಸುವುದು ಬೇಡ್ವಾ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
ಇದನ್ನು ನಿಮ್ಮ ಸುವರ್ಣ ನ್ಯೂಸ್.ಕಾಂ ಮನೆಗೆ ರೈಲು ಓಡಿಸಿಕೊಂಡ್ರೆ ಅನ್ಯರು ಮನೆಗೆ ಹೋಗೋದ್ಯಾಗೆ ಅಂಗಡಿಯವರೇ? ಎಂಬ ಹೆಡ್ ಲೈನ್ ಸುದ್ದಿ ನಿನ್ನೆ [ಬುಧವಾರ] ಪ್ರಕಟಿಸಿತ್ತು. ಈ ಸುದ್ದಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದಿದೆ.
ಸುವರ್ಣ ನ್ಯೂಸ್.ಕಾಂ ಸುದ್ದಿಗೆ ಸ್ಪಂದಿಸಿರುವ ಸಚಿವ ಸುರೇಶ್ ಅಂಗಡಿಯವರು ಕೂಡಲೇ ತಮ್ಮ ಅಧಿಕಾರಿಗಳ ಜತೆ ಮಾತನಾಡಿ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಬಿಡಲು ಸೂಚಿಸಿದ್ದಾರೆ.
ಸಚಿವರ ಸೂಚನೆಯಂತೆ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಿಂದ ರೈಲು ಕಲಬುರಗಿಗೆ ವಿಶೇಷ ರೈಲು ಸಂಚಾರಿಸಲಿದೆ ಎಂದು ಇಂದು [ಗುರುವಾರ] ಪ್ರಕಟಣೆ ಹೊರಬಿದ್ದಿದೆ.
ಈ ರೈಲು ಆಗಸ್ಟ್ 30ರಂದು ಯಲಹಂಕ ನಿಲ್ದಾಣದಿಂದ ಸಂಜೆ 5 ಗಂಟೆಗೆ ವಿಶೇಷ ರೈಲು ಹೊರಡಲಿದೆ. ಆಗಸ್ಟ್ 31ರ ಶನಿವಾರ ಬೆಳಗ್ಗೆ 4.20ಕ್ಕೆ ಕಲಬುರಗಿಗೆ ತಲುಪಲಿದೆ. ಸೆಪ್ಟೆಂಬರ್ 2ರ ಸೋಮವಾರ ರಾತ್ರಿ 8.30ಕ್ಕೆ ಕಲಬುರಗಿಯಿಂದ ಹೊರಡುವ ರೈಲು ಮಂಗಳವಾರ ಬೆಳಗ್ಗೆ 7.25ಕ್ಕೆ ಯಲಹಂಕಕ್ಕೆ ತಲುಪಲಿದೆ.
ಯಲಹಂಕದಿಂದ ಹೊರಡುವ ರೈಲು ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿ, ವಾಡಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ವಿಶೇಷ ರೈಲಿನಲ್ಲಿ ಎರಡು ತೃತೀಯ ಎಸಿ, 12 ಸ್ಲೀಪರ್ ಮತ್ತು 2 ಸಾಮಾನ್ಯ/ಲಗೇಜ್ ಸೇರಿ ಒಟ್ಟು 16 ಕೋಚ್‌ಗಳು ಇರಲಿವೆ. ಸಾರ್ವಜನಿಕರು ಈ ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.