ಕಲಬುರಗಿ, (ಆ.28): ರೇಲ್ವೆ ಇಲಾಖೆ (ನೈರುತ್ಯ ವಲಯ) ಆ. 30 ಹಾಗೂ ಸೆ. 2ರ ಅವಧಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಿಂದ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಾದಾಮಿ, ಕೊಪ್ಪಳ, ಗದಗ, ಬಳ್ಳಾರಿಗೆ ಜನ ಬಂದು ಹೋಗಲು 3 ವಿಶೇಷ ರೈಲುಗಳನ್ನೇ ಓಡಿಸುತ್ತಿದೆ. 

ಆದರೆ ಹೈದ್ರಾಬಾದ್ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳಿಗೆ ಈ ಭಾಗ್ಯವಿಲ್ಲ. ರೇಲ್ವೆ ಇಲಾಖೆಯ ಈ ಧೋರಣೆ  ಹೈ- ಕ ಭಾಗದವರನ್ನು ಕೆರಳಿಸಿದೆ. 

ಗೌರಿ ಗಣೇಶ್ ಹಬ್ಬದ ವಿಶೇಷ: KSRTCಯಿಂದ ಹೆಚ್ಚುವರಿ ಬಸ್, ರಿಯಾಯಿತಿಯೂ ಉಂಟು

ಪಾರ್ಲಿಮೆಂಟ್ ಇಲೆಕ್ಷನ್‍ ಸಮಯದಲ್ಲಿ ಕೇಳದೆ ರೈಲು ಓಡಿಸ್ದೋರು ಗಣೇಶ್ ಚೌತಿಗ್ಯಾಕೆ ನಮ್ಮನ್ನ ಮರೆತರೋ? ಎಂದು ಪ್ರಶ್ನಿಸುತ್ತಿದ್ದಾರೆ. ಚುನಾವಣೆ ಬಂದಾಗ ನೆನಪಾಗುವ ಹೈ-ಕ ಮಂದಿಗೆ ಹಬ್ಬದ ಸವಲತ್ತು ಕೊಡವಾಗ ನೆನಪಾಗೋದಿಲ್ಲವೆ? ಎಂದು ಜನ ರೇಲ್ವೆ ಇಲಾಖೆಯ ಮಲತಾಯಿ ಧೋರಣೆಗೆ ಶಪಿಸುತ್ತಿದ್ದಾರೆ.

ಗಣೇಶ ಚೌತಿ ವಿಶೇಷ ರೈಲುಗಳಿವು
1) ಬೆಂಗಳೂರು- ಬೆಳಗಾವಿ
2) ಮೈಸೂರು- ಬೆಂಗಳೂರು- ವಿಜಯಪೂರ ಎಕ್ಸಪ್ರೆಸ್
3) ಹುಬ್ಬಳ್ಳಿ- ವಿಜಯಪುರ
ಈ ಮೂರು ರೈಲುಗಳು ಆ. 30 ರಂದು ಮೈಸೂರು, ಬೆಂಗಳೂರು ಹುಬ್ಬಳ್ಳಿಯಿಂದ ಹೊರಡುತ್ತವೆ, ನಂತರ ಸೆ. 2 ರ ರಾತ್ರಿ ಮತ್ತೆ ಆಯಾ ನಿಗದಿಪಡಿಸಿದ ಊರುಗಳಿಂದ ಹೊರಟು ಮೈಸೂರು, ಬೆಂಗಳೂರು ಸೇರಲಿವೆ. ಈ ರೈಲುಗಳಿಗೆ ವಿಶೇಷ ದರ ಹಾಗೂ ವಿಶೇಷ ಕೋಚಿಂಗ್ ಸವಲತ್ತೂ ಮಾಡಲಾಗಿದ್ದು, ಈಗಾಗಲೇ ಬುಕಿಂಗ್ ಆರಂಭವಾಗಿದೆ.

ಕೇಂದ್ರ ರೇಲ್ವೆ ರಾಜ್ಯ ಸಚಿವರು ಸುರೇಶ ಅಂಗಡಿ ಬೆಳಗಾವಿ ಸಂಸದ. ಸಹಜವಾಗಿಯೇ ಬೆಳಗಾವಿಗೆ ಇಲಾಖೆ ಪ್ರಾಮುಖ್ಯತೆ ನೀಡೋದು. ಆದರೆ ಬೆಳಗಾವಿ ಸೇರಿದಂತೆ ಉ- ಕ ಜಿಲ್ಲೆಗಳಿಗೆಲ್ಲ ರೈಲು ಓಡಿಸಿರೋ ಇಲಾಖೆ ಹೈ- ಕ 4 ಜಿಲ್ಲೆಗಳನ್ನೇ ಯಾಕೆ ದೂರ ಇಡಬೇಕು? ಈ ಕ್ರಮದ ಹಿಂದಿನ ತರ್ಕ ಏನಿರಬಹುದು? ಎನ್ನುವುದು ಈ ಭಾಗದ ಜನರ ಪ್ರಶ್ನೆ.

ಹಿಂದೆ ಕಲಬುರಗಿಯಿಂದ ಕಾಂಗ್ರೆಸ್‍ನ ಡಾ. ಖರ್ಗೆ ಸಂಸದರಾಗಿದ್ದಾಗ ಕೇಂದ್ರದಲ್ಲಿ ಬಿಜೆಪಿ ಸರಕಾರವಿತ್ತು. ಈ ಭಾಗದಲ್ಲಿ ಯಾವುದೇ ರೈಲು ಓಡದಿದ್ದರೂ ಇದು ರಾಜಕೀಯ ಪ್ರೇರಿತ ಅಂದುಕೊಂಡು ಜನ ತೆಪ್ಪಗಿರುತ್ತಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ಕಲಬುರಗಿ ಸೇರಿದಂತೆ ಹೈ- ಕ ಭಾಗದ 5 ಸಂಸತ್ ಸ್ಥಾನಗಳು ಬಿಜೆಪಿ ಪಾಲಾಗಿವ., ಆದಾಗ್ಯೂ  ಮಲತಾಯಿ ಧೋರಣೆ ಮುಂದುವರಿದಿರೋದೇ ಜನರನ್ನು ಕಂಗಾಲಾಗಿಸಿದೆ. ಯಾಕೆ ರೇಲ್ವೆಗೆ ಹೈ- ಕ ಜಿಲ್ಲೆಗಳೆಂದರೆ ಅಪಥ್ಯ? ಎಂಬ ಪ್ರಶ್ನೆ ಕಾಡುತ್ತಿದೆ.

ವೇಟಿಂಗ್ ಲಿಸ್ಟ್  ಎಂಬ ಹನುಮನ ಬಾಲ!
ಗಣಪತಿ ಹಬ್ಬಕ್ಕಾಗಿ ಬೆಂಗಳೂರಿನಿಂದ ಹೈ- ಕ ಜಿಲ್ಲೆಗಳತ್ತ ಬರುವವರು ಅಧಿಕ. ರೇಲ್ವೆ ವೇಟಿಂಗ್ ಲಿಸ್ಟ್ ಹನುಮನ ಬಾಲವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಸಕ್ತ ಪ್ರಯಾಣಿಕರು ಉದ್ಯಾನ, ಬಸವ, ಕರ್ನಾಟಕ, ಸೊಲ್ಲಾಪುರ ಎಕ್ಸಪ್ರೆಸ್‍ನ ಆ. 27 ರ ವರೆಗಿನ ವೆಟಿಂಗ್ ಲಿಸ್ಟ್ ಮಾಹಿತಿ ಕ್ರೂಢೀಕರಿಸಿದ್ದು ಅದು ಈಗಲೇ 1, 392 ತಲುಪಿದೆ. 

ಈ ಪ್ರಮಾಣ 2 ಸಾವಿರ ದಾಟಿದರೂ ಅಚ್ಚರಿ ಪಡಬೇಕಾಗಿಲ್ಲ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ರೈಲು ಟಿಕೆಟ್‍ಗಾಗಿ ಕಾಯುತ್ತಿದ್ದರೂ ಸಹ ರೇಲ್ವೆಯವರ ಜಾಣ ಕುರುಡುತನ ಯಾಕೋ? ಎಂಬುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಮಾನ್ಯ ಸಚಿವರು ಸರೇಶ್ ಅಂಗಡಿ ಅವರು ಗಮನಹರಿಸಬೇಕಿದೆ.

ಮತ್ತೊಂದೆಡೆ ಗಣೇಶ ಚತುರ್ಥಿ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹೆಚ್ಚುವರಿಯಾಗಿ 1800 ಬಸ್‌ಗಳನ್ನು ಬಿಟ್ಟಿದೆ. ಅದು ಮುಂಗಾಡ ಟಿಕೆಟ್ ಕಾಯ್ದಿರಿಸಿದರೆ ರಿಯಾಯಿತಿ ಆಫರ್ ಕೂಡ ನೀಡಿದೆ. ಒಂದು ವೇಳೆ ಈ ಭಾಗದ ಜನರಿಗೆ ರೈಲ್ವೆ ಸಿಗಲಿಲ್ಲ ಅಂದ್ರೆ ಕೆಎಸ್‌ಆರ್‌ಟಿಸಿ ಬಸ್‌ಗಳ ಹೋಗಬಹುದು.