ತಮಗೆ ಬಿಸಿ ಮುಟ್ಟಿಸಿದ್ದ ರೈತನೊಂದಿಗೆ ಸೇಡು ತೀರಿಸಿಕೊಳ್ಳುತ್ತಿದ್ದ ಲಂಚಬಾಕ ಹೆಸ್ಕಾಂ ಅಧಿಕಾರಿಗಳು | ಸುವರ್ಣ ನ್ಯೂಸ್ ಫಲಶ್ರುತಿ | ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದಿಂದ ಸಮಸ್ಯೆ ಇತ್ಯರ್ಥ | ಬೆಳಕು ಕಂಡ ರೈತನ ಮನೆ

ಧಾರವಾಡ (ಅ.13): ವಿದ್ಯುತ್ ಸಂಪರ್ಕ ಪಡೆಯಲು ಲಂಚ ಕೊಡಲು ಒಪ್ಪದೇ ಲೋಕಾಯುಕ್ತರಿಗೆ ದೂರು ನೀಡಿ ಹೆಸ್ಕಾಂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಕ್ಕೆ ಕಿರುಕುಳ ಅನುಭವಿಸುತ್ತಿದ್ದ ರೈತನ ಬಗ್ಗೆ ಸುವರ್ಣ ನ್ಯೂಸ್ ಮಾಡಿದ್ದ ವರದಿಯ ಫಲಶ್ರುತಿಯಾಗಿ ಆತನ ಮನೆ ಬೆಳಕು ಕಂಡಿದೆ.

ಧಾರವಾಡ ತಾಲೂಕಿನ ಕುರಬಗಟ್ಟಿ ಗ್ರಾಮದ ವಿಠ್ಠಲ್ ವಕ್ಕುಂದ ಎಂಬ ರೈತ, 2010ರಲ್ಲಿ ಇವರ ಮನೆ ಬಳಿ ಇರೋ ವಿದ್ಯುತ್ ಕಂಬಗಳು ಬಿದ್ದು, ಟ್ರಾನ್ಸ್'ಫಾರ್ಮರ್ ಸುಟ್ಟು ಹೋಗಿತ್ತು. ಆಗ ಅದನ್ನು ಬದಲಿಸಿಕೊಡಲು ಸಾಲಿಮಠ್ ಎಂಬ ಅಧಿಕಾರಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಕೂಡಲೇ ಲೋಕಾಯುಕ್ತ ಪೊಲೀಸರಿಗೆ ವಿಠ್ಠಲ್ ದೂರು ನೀಡಿದ್ದರು.

ಆ ಬಳಿಕ ಹೆಸ್ಕಾಂ ಅಧಿಕಾರಿಗಳು ಮನೆ ಹಾಗೂ ಜಮೀನಿನ ವಿದ್ಯುತ್​​ ಸಂಪರ್ಕ ಕಡಿತ ಮಾಡಿದ್ದರು. ಕಳೆದ ಆರು ವರ್ಷಗಳಿಂದ ಈ ರೈತನ ಮನೆಗೆ ಕರೆಂಟ್​ ಕಣ್ಣಾಮುಚ್ಚಾಲೆ ಆಡುತ್ತಲೇ ಇತ್ತು.

ಆ ಬಗ್ಗೆ ಸುವರ್ಣ ನ್ಯೂಸ್​​ ಮಾಡಿದ ವರದಿ ಬಳಿಕ ಎಚ್ಚೆತ್ತ ಹೆಸ್ಕಾಂ ನೂತನ ಎಇಇ ಮಂಜುನಾಥ್, ರೈತ ವಿಠ್ಠಲ್ ಅವರ ಮನೆಗೆ ಭೇಟಿ ನೀಡಿ, ಮಾಹಿತಿ ಕಲೆಹಾಕಿ ಸಮಸ್ಯೆ ಬಗೆಹರಿಸಿದ್ದಾರೆ.