ಬಿಹಾರದ ಗದ್ದೆಯಲ್ಲಿ ಬಿದ್ದ ಉಲ್ಕಾ ಶಿಲೆ!
ಬಿಹಾರದ ಗದ್ದೆಯಲ್ಲಿ ಬಿದ್ದ ಉಲ್ಕಾ ಶಿಲೆ| 15 ಕೆ.ಜಿ. ಗಾತ್ರದ ಉಲ್ಕಾ ಶಿಲೆ ಬಿದ್ದು ಗದ್ದೆಯಲ್ಲಿ ಹೊಂಡ
ಪಟನಾ[ಜು.28]: ಉಲ್ಕಾಶಿಲೆಯೊಂದು ಭೂಮಿಗೆ ಅಪ್ಪಳಿಸಿರುವ ಘಟನೆ ಬಿಹಾರದ ಗ್ರಾಮವೊಂದರಲ್ಲಿ ನಡೆದಿದೆ. ಬೆಂಕಿಯ ಉಂಡೆಯಂತೆ ಕಾಣುತ್ತಿದ್ದ ಉಲ್ಕಾಶಿಲೆ ಗಂಟೆಗೆ 25,000 ಮೈಲಿ ವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಿ ರಭಸವಾಗಿ ಬಿದ್ದ ಪರಿಣಾಮ ಭತ್ತದ ಗದ್ದೆಯಲ್ಲಿ ಕುಳಿಯೊಂದು ಸೃಷ್ಟಿಯಾಗಿದೆ.
ಉಲ್ಕೆ ಬಿದ್ದಿದ್ದರಿಂದ ನಾವೆಲ್ಲಾ ಹೆದರಿ ಗದ್ದೆಯಿಂದ ಓಡಿಹೋಗಿವು ಎಂದು ರೈತರು ಹೇಳಿಕೊಂಡಿದ್ದಾರೆ. ಕುಳಿಯಿಂದ ಹೊಗೆ ಬರುವುದು ನಿಂತ ಬಳಿಕ ರೈತರು ಕಲ್ಲನ್ನು ಹೊರಗೆದಿದ್ದಾರೆ. ಉಲ್ಕಾ ಶಿಲೆ 15 ಕೆ.ಜಿ. ತೂಕ ಇದ್ದು, ಭೂಮಿಯಲ್ಲಿ ದೊರೆಯುವ ಸಾಮಾನ್ಯ ಕಲ್ಲಿನಂತೆಯೇ ಇದೆ. ಈ ಕಲ್ಲನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಸಾಮಾನ್ಯವಾಗಿ ಉಲ್ಕೆಗಳು ಧೂಳು ಹಾಗೂ ಕಲ್ಲಿನ ಕಣಗಳಿಂದ ನಿರ್ಮಾಣವಾಗುತ್ತವೆ. ಅವು ಭೂಮಿಯ ವಾತಾವರಣದ ಮೂಲಕ ಹಾದು ಹೋಗುತ್ತಿದ್ದಂತೆ ಉರಿದು ಹೋಗುತ್ತವೆ. ಆದರೆ, ಈ ಬಾರಿ ದೊಡ್ಡ ಗಾತ್ರದ ಕಲ್ಲೊಂದು ದೊರೆತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ ತಮಿಳುನಾಡಿನಲ್ಲಿ ಉಲ್ಕೆಯೊಂದು ಬಸ್ ಮೇಲೆ ಬಿದ್ದ ಪರಿಣಾಮ ಬಸ್ ಚಾಲಕ ಮೃತಪಟ್ಟು ಮೂವರು ಗಾಯಗೊಂಡ ಘಟನೆ ನಡೆದಿತ್ತು.