ನವದೆಹಲಿ (ಡಿ. 04): 2019ರಲ್ಲಿ ವಿದಿಶಾದಿಂದ ಸ್ಪರ್ಧಿಸೋದಿಲ್ಲ, ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಸುಷ್ಮಾ ಸ್ವರಾಜ್‌ ಹೇಳಿದ್ದು ಬಿಜೆಪಿಯ ವೃದ್ಧರ ಚಿಂತೆಯನ್ನು ಹೆಚ್ಚಿಸಿದೆ.

ಗಾಂಧಿ ನಗರದಿಂದ ಅಡ್ವಾಣಿ, ಅಲಹಾಬಾದ್‌ನಿಂದ ಮುರಳಿ ಮನೋಹರ ಜೋಶಿ, ಕಾನ್ಪುರದಿಂದ ಕಲರಾಜ್‌ ಮಿಶ್ರಾ ಅವರಿಗೆ ಟಿಕೆಟ್‌ ಕೊಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳು ಎದ್ದಿವೆ. ಕಳೆದ ತಿಂಗಳು ಅಡ್ವಾಣಿ ಮನೆಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಹೋಗಿದ್ದ ಮೋದಿ, ಬಿಜೆಪಿಯ ಭೀಷ್ಮನನ್ನು ಅರ್ಧ ಗಂಟೆ ಪ್ರತ್ಯೇಕವಾಗಿ ಮಾತನಾಡಿಸಿದ್ದಾರೆ. ಆದರೆ ಏನು ಮಾತನಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ.

ಇನ್ನು ಟಿಕೆಟ್‌ ಕಟ್‌ ಮಾಡಬಹುದು ಎಂದು ಅರಿತಿರುವ ಮುರಳಿ ಮನೋಹರ ಜೋಶಿ, ಸಂಸದೀಯ ಖರ್ಚುವೆಚ್ಚ ಸಮಿತಿಯಿಂದ ಆರ್‌ಬಿಐ ಮುಖ್ಯಸ್ಥರಿಗೆ ಬುಲಾವ್‌ ಕಳಿಸಿರುವುದು ಒಂದು ಹೊಸ ತಲೆನೋವು. ಜೋಶಿ ಮತ್ತು ಮಿಶ್ರಾ ಇಬ್ಬರಿಗೂ ಟಿಕೆಟ್‌ ಕೊಡಲಿಲ್ಲವೆಂದರೆ ಯುಪಿಯಲ್ಲಿ ಬ್ರಾಹ್ಮಣರು ಕೋಪಗೊಳ್ಳಬಹುದು ಎಂಬ ಆತಂಕ ಬೇರೆ. ದೇಶಕ್ಕೆ ಯೋಗಾಸನ ಮಾಡಿಸುವ ಪ್ರಧಾನಿ ಮೋದಿಗೇ ಈ ಅನುಭವಿ ವೃದ್ಧರು ಕೆಲವೊಮ್ಮೆ ಶೀರ್ಷಾಸನ ಮಾಡಿಸಲು ಯತ್ನಿಸುತ್ತಾರೆ ನೋಡಿ!

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ