ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಮರ್ಯಾದೆಯನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಹರಾಜು ಹಾಕಿದ್ದಾರೆ.

ನವದೆಹಲಿ (ಸೆ.23): ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಮರ್ಯಾದೆಯನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಹರಾಜು ಹಾಕಿದ್ದಾರೆ.

ಭಯೋತ್ಪಾದನೆ ಇಡೀ ವಿಶ್ವಕ್ಕೆ ಮಾರಕವಾಗಿದೆ. ಜಗತ್ತು ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವು ಈಗ ಹಲವು ದೃಢ ನಿರ್ಧಾರ ಕೈಗೊಳ್ಳಬೇಕಾಗಿದೆ. ಬಡತನ ನಿರ್ಮೂಲನೆ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ವಿಶ್ವಸಂಸ್ಥೆ ಸುಧಾರಣಾ ನೀತಿಯನ್ನು ಭಾರತ ಸ್ವಾಗತಿಸುತ್ತದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ನಾವು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಪಾಕಿಸ್ತಾನ ನಮ್ಮ ವಿರುದ್ಧವೇ ಸಮರ ಸಾರುತ್ತಿದೆ. ಪಾಕಿಸ್ತಾನ ಶಾಂತಿಯ ಬಗ್ಗೆ ಮಾತನಾಡುವುದು ಹಾಸ್ಯಸ್ಪದ. ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದುವಾಗಿದೆ. ಶಾಂತಿ ಮಾತುಕತೆಗೆ ಇನ್ನೂ ಮುಂದೆ ಬಂದಿಲ್ಲ. ನನ್ನಲ್ಲಿ ಒಂದು ಪ್ರಶ್ನೆ ಇದೆ. ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಂಡಿದೆಯಾ? ಪಾಕಿಸ್ತಾನ ಭಯೋತ್ಪಾದಕರನ್ನು ಹುಟ್ಟು ಹಾಕಿದೆ. ಆದರೆ ಭಾರತ ಹೆಸರಾಂತ ವೈದ್ಯರು, ವಿಜ್ಞಾನಿಗಳನ್ನು ಹುಟ್ಟು ಹಾಕಿದೆ. ಪಾಕಿಸ್ತಾನ ಜಿಹಾದ್​, ಭಯೋತ್ಪಾದನೆಯಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಪಾಕಿಸ್ತಾನದ ವಿರುದ್ಧ ಸಚಿವೆ ಸುಷ್ಮಾ ಸ್ವರಾಜ್​ ಕಿಡಿಕಾರಿದ್ದಾರೆ.