ರಫೆಲ್ ಒಪ್ಪಂದ ಕುರಿತು ಮತ್ತೆ ಕೇಂದ್ರದ ವಿರುದ್ಧ ಹರಿಹಾಯ್ದ ರಾಹುಲ್! ಮೋದಿ-ಅಂಬಾನಿಯಿಂದ ರಕ್ಷಣಾ ಪಡೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್! ಹುತಾತ್ಮ ಸೈನಿಕರಿಗೆ ಅಗೌರವ ತೋರಿದ ಮೋದಿ-ಅಂಬಾನಿ! ರಫೆಲ್ ಒಪ್ಪಂದ ಕುರಿತು ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶ
ನವದೆಹಲಿ(ಸೆ.22): ರಫೆಲ್ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅನಿಲ್ ಅಂಬಾನಿ ಹಾಗೂ ನರೇಂದ್ರ ಮೋದಿ ರಕ್ಷಣಾ ಪಡೆಗಳ ಮೇಲೆ ಜಂಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಢಿಫೆನ್ಸ್ ಅನ್ನು ಆಯ್ಕೆ ಮಾಡಿದ್ದು ಭಾರತ ಸರ್ಕಾರವೇ ಎಂಬ ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಪ್ರಧಾನಿ ಹಾಗೂ ಅಂಬಾನಿ ಜಂಟಿಯಾಗಿ ನಮ್ಮ ರಕ್ಷಣಾ ಪಡೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಎಂದು ಆರೋಪಿಸಿದ್ದಾರೆ.
ಮೋದಿ ಮತ್ತು ಅಂಬಾನಿ ಹುತಾತ್ಮ ಯೋಧರ ಬಲಿದಾನಕ್ಕೆ ಅಗೌರವ ತೋರಿದ್ದು, ರಫೆಲ್ ಒಪ್ಪಂದ ಕುರಿತು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದ ಆರೋಪಗಳಲ್ಲಿ ಸತ್ಯಾಂಶವಿದೆ ಎಂಬುದು ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆಯಿಂದ ಸಾಬೀತಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
