ಕಳೆದ ನಾಲ್ಕು ದಿನಗಳಿಂದ ನಂಜನಗೂಡಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸ್ನೇಹಿತರೊಂದಿಗೆ ತೊಡಗಿದ್ದೇನೆ. ರಾತ್ರಿ ಉಳಿದಿರುವುದು ನಾವೇ ತೀರ್ಮಾನ ಮಾಡಿ ಆರಿಸಿಕೊಂಡಿರುವ (ಯಾವುದೇ ಪಂಚತಾರಾ ಹೋಟೆಲ್'ಗೆ ಕಡಿಮೆ ಇಲ್ಲದ) ಖುಷಿ ತಂದ ಗದ್ದೆಯ ವಾತಾವರಣದಲ್ಲಿ. ಒಳ್ಳೆಯ ಗಾಳಿ ನಮ್ಮ ಪಾಲಿಗೆ ದೊರಕುತ್ತಿರುವುದು ಇನ್ನಷ್ಟು ಸಂತಸ ತಂದಿದೆ ಎಂದು ಸುರೇಶ್‌'ಕುಮಾರ್‌ ಹೇಳಿಕೊಂಡಿದ್ದಾರೆ.
ಕೊಟ್ಟಿಗೆ ಲೈಫ್
* ನಂಜನಗೂಡು ಪ್ರಚಾರಕ್ಕೆ ತೆರಳಿರುವ ಬಿಜೆಪಿ ನಾಯಕ
* ಹಳ್ಳಿಯಲ್ಲಿರುವ ಸ್ನೇಹಿತನ ದನದ ಕೊಟ್ಟಿಗೆಯಲ್ಲಿ 4 ದಿನದಿಂದ ವಾಸ್ತವ್ಯ
* ಇದು ಯಾವುದೇ ಸ್ಟಾರ್ ಹೋಟೆಲ್'ಗಿಂತ ಕಮ್ಮಿಯಿಲ್ಲ ಎಂದು ಬರೆದುಕೊಂಡ ಶಾಸಕ
* ಗದ್ದೆಯ ಬೋರ್'ವೆಲ್ ನೀರಿನಲ್ಲೇ ಸ್ನಾನ: ಫೇಸ್'ಬುಕ್'ನಲ್ಲಿ ಬರೆದುಕೊಂಡ ಬಿಜೆಪಿ ನಾಯಕ
* ಹೋಟೆಲ್'ಗಳಲ್ಲಿ ತಂಗಿರುವ ಇತರ ಧುರೀಣರು
ಬೆಂಗಳೂರು(ಏ. 04): ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕಾವು ಮೂಡಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳಿರುವ ಅತಿರಥ ಮಹಾರಥರು ಸೇರಿದಂತೆ ಸಣ್ಣ ಪುಟ್ಟರಾಜಕಾರಣಿಗಳೂ ಹೋಟೆಲ್'ಗಳು, ಸ್ಥಳೀಯ ಮುಖಂಡರ ನಿವಾಸಗಳಲ್ಲಿ ಎಲ್ಲ ಸವಲತ್ತುಗಳ ಜತೆ ವಾಸ್ತವ್ಯ ಹೂಡಿದ್ದಾರೆ.
ಆದರೆ, ಪ್ರಚಾರಕ್ಕಾಗಿ ಬೆಂಗಳೂರಿನಿಂದ ತೆರಳಿರುವ ಮಾಜಿ ಸಚಿವರೂ ಆಗಿರುವ ಒಬ್ಬ ಹಿರಿಯ ಮುಖಂಡರು ಮಾತ್ರ ಕಳೆದ ನಾಲ್ಕು ದಿನಗಳಿಂದ ದನದ ಕೊಟ್ಟಿಗೆಯಲ್ಲಿ ಇಷ್ಟಪಟ್ಟು ವಾಸ ಮಾಡುತ್ತಿದ್ದಾರೆ. ಇದು ಅಚ್ಚರಿಯಾದರೂ ನಿಜ. ಅವರು- ಬಿಜೆಪಿಯ ಹಿರಿಯ ಮುಖಂಡರೂ ಆಗಿರುವ ಮಾಜಿ ಸಚಿವ, ಪಕ್ಷದ ರಾಜ್ಯ ವಕ್ತಾರ ಎಸ್.ಸುರೇಶ್ಕುಮಾರ್.
ನಂಜನಗೂಡು ತಾಲೂಕಿನ ಆಲಂಬೂರು ಮುಂಟಿ ಗ್ರಾಮದ ಬಳಿಯ ಕಪಿಲೇಶ್ ಎಂಬುವರಿಗೆ ಸೇರಿದ ಗದ್ದೆಯಲ್ಲಿರುವ ದನದ ಕೊಟ್ಟಿಗೆಯಲ್ಲಿ ಸುರೇಶ್ಕುಮಾರ್ ಅವರು ನಾಲ್ಕು ದಿನಗಳಿಂದ ವಾಸವಾಗಿದ್ದಾರೆ. ನಿತ್ಯ ಪ್ರಚಾರ ಮುಗಿಸಿದ ನಂತರ ಈ ಕೊಟ್ಟಿಗೆಗೆ ಆಗಮಿಸುವ ಅವರು ಇಲ್ಲಿಯೇ ನಿದ್ರೆ ಮಾಡಿ, ಮರುದಿನ ನಿತ್ಯಕರ್ಮಗಳನ್ನು ಪೂರೈಸಿ ಮತ್ತೆ ಪ್ರಚಾರಕ್ಕೆ ತೆರಳುತ್ತಿದ್ದಾರೆ.
ಈ ಬಗ್ಗೆ ಫೇಸ್'ಬುಕ್ನಲ್ಲಿ ಖುದ್ದು ಸುರೇಶ್'ಕುಮಾರ್ ಅವರೇ ಫೋಟೋಗಳ ಸಮೇತ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಇದಕ್ಕೆ ಸುಮಾರು 11 ಸಾವಿರಕ್ಕೂ ಹೆಚ್ಚು ಜನ ಲೈಕ್ ಒತ್ತಿದ್ದಾರೆ. ಇದು 2 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ಜತೆಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ವಾಸದ ಬಗ್ಗೆ ಸುರೇಶ್ಕುಮಾರ್ ಹೇಳಿಕೊಂಡಿರುವುದು ಹೀಗೆ:
- ಕಳೆದ ನಾಲ್ಕು ದಿನಗಳಿಂದ ನಂಜನಗೂಡಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸ್ನೇಹಿತರೊಂದಿಗೆ ತೊಡಗಿದ್ದೇನೆ. ರಾತ್ರಿ ಉಳಿದಿರುವುದು ನಾವೇ ತೀರ್ಮಾನ ಮಾಡಿ ಆರಿಸಿಕೊಂಡಿರುವ (ಯಾವುದೇ ಪಂಚತಾರಾ ಹೋಟೆಲ್'ಗೆ ಕಡಿಮೆ ಇಲ್ಲದ) ಖುಷಿ ತಂದ ಗದ್ದೆಯ ವಾತಾವರಣದಲ್ಲಿ. ಒಳ್ಳೆಯ ಗಾಳಿ ನಮ್ಮ ಪಾಲಿಗೆ ದೊರಕುತ್ತಿರುವುದು ಇನ್ನಷ್ಟು ಸಂತಸ ತಂದಿದೆ. ರಾತ್ರಿ ಮಲಗುತ್ತಿರುವುದು ಗೆಳೆಯ ಕಪಿಲೇಶ್ ಅವರ ಆಲಂಬೂರು ಮುಂಟಿ ಗ್ರಾಮದ ಗದ್ದೆಯಲ್ಲಿರುವ ದನದ ಕೊಟ್ಟಿಗೆಯಲ್ಲಿ. ಸ್ನಾನಕ್ಕೆ ಗದ್ದೆಯ ಬೋರ್'ವೆಲ್ ನೀರು. ಬೆಳಿಗ್ಗೆಯಿಂದ ಓಡಾಡಿ ಸುಸ್ತಾಗುವ ದೇಹಕ್ಕೆ ಅತ್ಯಂತ ಸುಖಕರ ನಿದ್ದೆಯನ್ನು ದಯಪಾಲಿಸಿರುವ ಈ ವಾತಾವರಣಕ್ಕೆ ಧನ್ಯೋಸ್ಮಿ.
ಕನ್ನಡಪ್ರಭ ವಾರ್ತೆ
epaper.kannadaprabha.in
