ಹುಟ್ಟಿದ ಎರಡು ಗಂಟೆಯಲ್ಲೇ ಎಲ್ಲಾ ಅಧಿಕೃತ ದಾಖಲೆಗಳು| ಸೂರತ್‌ನ ರಮಯ್ಯಾಗೆ ದೇಶದ ಅತಿ ಕಿರಿಯ ಪ್ರಜೆ ಎಂಬ ಹೆಗ್ಗಳಿಕೆ| ಜನಿಸಿದ ಎರಡು ಗಂಟೆಯೊಳಗಾಗಿ ಆಧಾರ್, ಪಾಸ್‌ಪೋರ್ಟ್‌| ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಬೆಂಬಲಿಗರು

ಸೂರತ್‌(ಡಿ.16): ಮಕ್ಕಳನ್ನು ಹೆತ್ತರಷ್ಟೇ ಕುಟುಂಬ ಕಲ್ಯಾಣ ಯೋಜನೆ ಎನಿಸಿಕೊಳ್ಳಲ್ಲ. ಹೆತ್ತ ಮಗುವಿನ ಸುಭದ್ರ ಭವಿಷ್ಯಕ್ಕಾಗಿ ಸರಿಯಾದ ಯೋಜನೆಯೂ ಕಲ್ಯಾಣ ಕುಟುಂಬದ ಸಂಕೇತ.

ಮಗುವಾಗುತ್ತಿದ್ದಂತೇ ಸದನ್ನು ಸಂಬಂಧಿಕರು, ನೆಂಟರು, ನೆರೆ ಹೊರೆಯವರು, ಗೆಳೆಯರು ಹೀಗೆ ಎಲ್ಲರಿಗೂ ಫೊನ್ ಮಾಡಿ ತಿಳಿಸುತ್ತಾ, ಈಗಷ್ಟೇ ಕಣ್ಣು ಬಿಟ್ಟ ಕಂದಮ್ಮನ ಪುಟ್ಟ ಮುಖಕ್ಕೆ ಮೊಬೈಲ್ ಹಿಡಿದು ಫೋಟೋ ಕ್ಲಿಕ್ಕಿಸಿ ಎಲ್ಲರೊಂದಿಗೆ ಶೇರ್ ಮಾಡುತ್ತಾ ಸಂತಸ ಹಂಚಿಕೊಳ್ಳುವವರೇ ಹೆಚ್ಚು. 

ಆದರೆ ಇಲ್ಲೋರ್ವ ಪಾಲಕರು ತಮ್ಮ ಮಗು ಜನಿಸಿದ ಕೇವಲ ಎರಡೇ ಗಂಟೆಗಳಲ್ಲಿ, ಆ ಮಗು ಮುಂದೆ ಭಾರತದ ಪ್ರಜೆಯಾಗಿ ಬದುಕಲು ಬೇಕಾಗಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟಿಕೊಂಡಿದ್ದಾರೆ .

ಹೌದು, ಜನಿಸಿದ ಎರಡು ಗಂಟೆ ಒಳಗೇ ಆಧಾರ್‌ ಕಾರ್ಡ್‌ ಪಡೆಯುವ ಮೂಲಕ ಸೂರತ್‌ನ ರಮಯ್ಯಾ ದೇಶದ ಅತಿ ಕಿರಿಯ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. 

ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿರುವ ಅಂಕಿತ್‌ ನಾಗರಾಣಿ ಮತ್ತು ಭೂಮಿ ನಾಗರಾಣಿ ಡಿಜಿಟಲ್‌ ಇಂಡಿಯಾ ಅಭಿಯಾನದ ಬೆಂಬಲಿಗರು. ತಮಗೆ ಮಗು ಜನಿಸಿದ ಒಂದು ದಿನದೊಳಗೇ ಹೆಸರು ನೋಂದಾಯಿಸುವ ಕನಸು ಕಂಡಿದ್ದರು. 

ಅದರಂತೆ ಕೇವಲ ಎರಡು ಗಂಟೆಯಲ್ಲೇ ಮಗುವಿನ ಜನನ ಪ್ರಮಾಣಪತ್ರ, ಆಧಾರ್‌ನಲ್ಲಿ ಹೆಸರು ನೋಂದಾವಣೆ, ಪಾಸ್‌ಪೋರ್ಟ್‌ ಅರ್ಜಿ ಹೀಗೆ ಎಲ್ಲವನ್ನೂ ರೆಡಿ ಮಾಡಿಸಿ ತಮ್ಮ ಮಗುವಿಗೆ ಗಿಫ್ಟ್ ನೀಡಿದ್ದಾರೆ ಈ ದಂಪತಿ.