ನವದೆಹಲಿ[ಆ.08]: ಬಂಡೀಪುರ ರಾಷ್ಟ್ರೀಯ ಹೆದ್ದಾರಿ- 212ರಲ್ಲಿ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಅಲ್ಲದೆ, ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿನ ಕೋರ್‌ ವಲಯವನ್ನು ಮುಟ್ಟದಂತೆ ಪರ್ಯಾಯ ರಸ್ತೆಯ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಮುಂದಾಗುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನೂ ನೀಡಿದೆ. ಈ ಮೂಲಕ ಬಂಡೀಪುರದ ಕೋರ್‌ ವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚುವ ಸಾಧ್ಯಾಸಾಧ್ಯತೆಗಳತ್ತಲೂ ನ್ಯಾಯಾಲಯ ಗಮನ ಹರಿಸುವ ಸೂಚನೆ ಲಭಿಸಿದೆ.

ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಹಾದುಹೋಗುವ ರಾ.ಹೆ. 212ರಲ್ಲಿ ಗುಂಡ್ಲುಪೇಟೆಯಿಂದ ಸುಲ್ತಾನ್‌ಬತ್ತೇರಿ ಮತ್ತು ರಾ.ಹೆ. 67ರಲ್ಲಿ ಗುಂಡ್ಲುಪೇಟೆಯಿಂದ ಊಟಿ ಮಧ್ಯೆ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿ 2009ರಲ್ಲಿ ಚಾಮರಾಜನಗರದ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಕೇರಳದ ವಯನಾಡಿನ ಜನರಿಗೆ ರಾತ್ರಿ ವಾಹನ ಸಂಚಾರ ನಿಷೇಧದಿಂದ ತೊಂದರೆಯಾಗುತ್ತದೆ ಎಂಬ ಒತ್ತಡ ನಿರ್ಮಾಣವಾದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಆದೇಶವನ್ನು ಹಿಂಪಡೆದಿದ್ದರು. ಆದರೆ ಇದನ್ನು ಪ್ರಶ್ನಿಸಿ ವಕೀಲ ಶ್ರೀನಿವಾಸ್‌ ಬಾಬು ಹೈಕೋರ್ಟ್‌ ಮೊರೆ ಹೋಗಿದ್ದರು. ಜಿಲ್ಲಾಧಿಕಾರಿ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಮತ್ತು ಕೆಲ ಹೋಟೆlf ಮಾಲೀಕರ ಸಂಘಟನೆಗಳು 2010ರಲ್ಲಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದವು. ಈ ಪ್ರಕರಣದ ವಿಚಾರಣೆಯ ಹಂತದಲ್ಲಿ ಕೇರಳ ಸರ್ಕಾರ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸುವಂತೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಸುಪ್ರೀಂ ಕೋರ್ಟ್‌ ಒಪ್ಪಿರಲಿಲ್ಲ.

4 ವಾರದಲ್ಲಿ ಅಫಿಡವಿಟ್‌ ಸಲ್ಲಿಸಿ:

ಬುಧವಾರ ಸುಪ್ರೀಂ ಕೋರ್ಟಿನ ನ್ಯಾ| ರೋಹಿಂಟನ್‌ ನಾರಿಮನ್‌ ಮತ್ತು ನ್ಯಾ| ಸೂರ್ಯಕಾಂತ್‌ ಅವರಿದ್ದ ನ್ಯಾಯಪೀಠವು ಪ್ರಕರಣದ ಬಗ್ಗೆ ವಿವರವಾದ ವಿಚಾರಣೆ ನಡೆಸಿ, ಪ್ರಸಕ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದು ವಿಹಿತವಲ್ಲ ಎಂಬ ನಿಲುವಿಗೆ ಬಂದಿದೆ. ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪರಿಸರ ಮತ್ತು ಅರಣ್ಯ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ ಈ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು. ದೀರ್ಘಾವಧಿಯಲ್ಲಿ ಈ ಮಾರ್ಗವನ್ನು ಮುಚ್ಚಲು ಪೂರಕವಾಗುವಂತಹ ಸಲಹೆಯನ್ನು ನಾಲ್ಕು ವಾರದಲ್ಲಿ ಅಫಿಡವಿಟ್‌ ಮೂಲಕ ಸಲ್ಲಿಸುವಂತೆ ನ್ಯಾಯಾಲಯವು ನಿರ್ದೇಶನವನ್ನು ನೀಡಿದೆ.

ಈ ಹಿಂದೆ ಸುಪ್ರೀಂ ಕೋರ್ಟ್‌ ಭೂಸಾರಿಗೆ ಸಚಿವಾಲಯದ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರದ ಅಧಿಕಾರಿಗಳು ಮತ್ತು ಹುಲಿ ಸಂರಕ್ಷಣಾ ಪ್ರಾಧಿಕಾರದ ಜೊತೆ ಸಮಾಲೋಚನೆ ನಡೆಸಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಹೇಳಿತ್ತು. ಭೂ ಸಾರಿಗೆ ಸಚಿವಾಲಯ ರಾತ್ರಿ ಸಂಚಾರಕ್ಕೆ ಒಲವು ಹೊಂದಿದ್ದರೂ ಹುಲಿ ಸಂರಕ್ಷಣಾ ಪ್ರಾಧಿಕಾರ ಇದನ್ನು ಖಂಡತುಂಡವಾಗಿ ವಿರೋಧಿಸಿತ್ತು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ರಾತ್ರಿ ಸಂಚಾರಕ್ಕೆ ಸದಾ ವಿರೋಧವನ್ನೇ ವ್ಯಕ್ತಪಡಿಸಿಕೊಂಡು ಬಂದಿದ್ದವು.

ಕೇರಳ ಸರ್ಕಾರವು ರಾತ್ರಿ ಸಂಚಾರ ನಿಷೇಧದಿಂದಾಗಿ ತನ್ನ ಆರ್ಥಿಕ ಚಟುವಟಿಕೆಗಳಿಗೆ, ಜನಸಂಚಾರಕ್ಕೆ ತೊಂದರೆಯಾಗಿದೆ ಎಂದು ವಾದಿಸಿದರೆ, ಕರ್ನಾಟಕವು ಹುಲಿ ಸಂರಕ್ಷಿತಾರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧ ಅತ್ಯಂತ ಅಗತ್ಯವಾಗಿದ್ದು, ತುರ್ತು ವಾಹನಗಳು ಮತ್ತು ನಾಲ್ಕು ಬಸ್‌ಗಳಿಗೆ ಸಂಚಾರ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿತ್ತು. ಅಷ್ಟೇ ಅಲ್ಲದೇ ಈಗಾಗಲೇ 75 ಕೋಟಿ ರೂ. ವೆಚ್ಚದಲ್ಲಿ ಪರ್ಯಾಯ ಮಾರ್ಗವನ್ನು ರೂಪಿಸಿದ್ದೇವೆ ಎಂದು ರಾಜ್ಯದ ಪರ ಹಿರಿಯ ವಕೀಲ ಬಸವ ಪ್ರಭು ಪಾಟೀಲ್ ಸಮರ್ಥಿಸಿಕೊಂಡಿದ್ದರು.

ಈ ವೇಳೆ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಾದಿಸಲು ನ್ಯಾಯಾಲದಲ್ಲಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಕೂಡ ಕರ್ನಾಟಕದ ನಡೆಯನ್ನು ಸಮರ್ಥಿಸಿದ್ದರು. ಅಭಯಾರಣ್ಯಗಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು ಇದಕ್ಕಾಗಿ ನಮ್ಮ ಪಯಣದ ಹಾದಿ ದೂರವಾದರೂ ತೊಂದರೆಯಿಲ್ಲ ಎಂದು ಹೇಳಿದ್ದರು.