ನವದೆಹಲಿ(ಜು.16): ಜನಾದೇಶ ದೊರೆತು ವರ್ಷವಾದರೂ ಆಡಳಿತ ನಡೆಸದ ಸರ್ಕಾರ, ಜನರ ಒಳಿತಿಗಾಗಿ ಸರ್ಕಾರಕ್ಕೆ ಆಡಳಿತ ನಡೆಸಲು ಬಿಡದ ವಿಪಕ್ಷ. ಇದೆಲ್ಲರ ಸಾರವೇ ಕರ್ನಾಟಕ ರಾಜಕೀಯ ಕ್ಷೇತ್ರದ ನೈತಿಕತೆ ಅಧೋಗತಿಗೆ ಇಳಿದಿರುವುದು.

ಕರ್ನಾಟಕದ ಸದ್ಯದ ರಾಜಕೀಯ ಹೈಡ್ರಾಮಾ ಸುಪ್ರೀಂ ಅಂಗಳದಲ್ಲಿ ಕುಣಿದಾಡುತ್ತಿದ್ದು, ಶಾಸಕರ ರಾಜೀನಾಮೆ ಮತ್ತ ಸ್ಪೀಕರ್ ನಡೆ ಕುರಿತು ಸುಪ್ರೀಂಕೋರ್ಟ್'ನಲ್ಲಿ ಇಂದು ಸುದೀರ್ಘ ವಿಚಾರಣೆ ಅಂತ್ಯ ಕಂಡಿದೆ.

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ಶೀರ್ಘವಾಗಿ ಅಂಗೀಕರಿಸಬೇಕೆಂದು ಸುಪ್ರೀಂ ಮೊರೆ ಹೋಗಿದ್ದರು. ಅದರಂತೆ ಸ್ಪೀಕರ್ ಕೂಡ ಸುಪ್ರೀಂಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿ ಶೀರ್ಘ ವಿಚಾರಣೆ ಸಾಧ್ಯವಿಲ್ಲ ಎಂದು ವಾದಿಸಿದ್ದರು.

ರಾಜೀನಾಮೆ ನೀಡಿದ ಶಾಸಕರ ಪರ ಸುಪ್ರೀಂಕೋರ್ಟ್'ನಲ್ಲಿ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಶಾಸಕರ ರಾಜೀನಾಮೆಗೆ ಸಂವಿಧಾನದ 10ನೇ ಪರಿಚ್ಛೇದ ಸಂಬಂಧ ಇಲ್ಲವಾಗಿದ್ದು, ಸ್ಪೀಕರ್ ವಿಳಂಬ ಧೋರಣೆಯಿಂದಾಗಿ ರಾಜೀನಾಮೆ ನೀಡಿದ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ವಾದಿಸಿದರು.

ಅತೃಪ್ತ ಶಾಸಕರ ಪರ ಮುಕುಲ್ ರೋಹಟಗಿ ವಾದ; ಒಂದು ದಿನದ ಫೀಸ್ ಮಾತ್ರ ಬಲು ದುಬಾರಿ!

ಸ್ಪೀಕರ್ ರಾಜೀನಾಮೆ ಅಂಗೀಕರಿಸದ ಪರಿಣಾಮ, ವಿಶ್ವಾಸಮತ ಯಾಚನೆ ವೇಳೆ ವಿಪ್ ಜಾರಿ ಮಾಡುವ ಮೂಲಕ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ರೋಹ್ಟಗಿ ವಾದಿಸಿದರು.

ನಿಯಮದ ಪ್ರಕಾರ ಸ್ಪೀಕರ್ ತಕ್ಷಣ ರಾಜೀನಾಮೆ ಅಂಗೀಕರಿಸಬೇಕಿದ್ದು, ಹಾಗೆ ಮಾಡದೇ ಸ್ಪೀಕರ್ ತಮ್ಮ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ರೋಹ್ಟಗಿ ನ್ಯಾಯಪೀಠದ ಮುಂದೆ ಗಂಭೀರ ಆರೋಪ ಮಾಡಿದರು.

ಇನ್ನು ಸ್ಪೀಕರ್ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ರಾಜೀನಾಮೆ ಕುರಿತು ಸ್ಪೀಕರ್ ವಿಚಾರಣೆಗೆ ಕರೆದಿದ್ದರೂ ಯಾರೂ ಹಾಜರಾಗಿಲ್ಲ. ಈ ಕಾರಣಕ್ಕೆ ಸ್ಪೀಕರ್ ರಾಜೀನಾಮೆ ಅಂಗೀಕಾರವನ್ನು ತಡೆ ಹಿಡಿದಿದ್ದಾರೆ ಎಂದು ಹೇಳಿದರು.

ಅನರ್ಹತೆ ಹಾಗೂ ರಾಜೀನಾಮೆಗೂ ಸಂಬಂಧಿವಿದ್ದು, ಅನರ್ಹತೆ ವಿಚಾರಣೆ ಮೊದಲಾ, ರಾಜೀನಾಮೆ ವಿಚಾರಣೆ ಮೊದಲಾ ಎಂಬ ಚರ್ಚೆಯೇ ಅನವಶ್ಯಕ ಎಂದು ಸಿಂಗ್ವಿ ವಾದಿಸಿದರು.

ನಿಯಮ 202ರ ಪ್ರಕಾರ ಸ್ಪೀಕರ್ ರಾಜೀನಾಮೆ ಅಂಗೀಕರಿಸಲು ಶಾಸಕರು ಖುದ್ದು ವಿಚಾರಣೆಗೆ ಹಾಜರಾಗಬೇಕು. ಆದರೆ ಇದುವರೆಗೂ ಯಾವುದೇ ಶಾಸಕರು ಸ್ಪೀಕರ್ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ರಾಜೀನಾಮೆ ಅಂಗೀಕರಿಸದ ಸ್ಪೀಕರ್ ನಡೆ ಸಂವಿಧಾನಬದ್ಧವಾಗಿದೆ ಎಂದು ಸಿಂಗ್ವೀ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲು ಪ್ರುಯತ್ನಿಸಿದ್ದರು.

ಇನ್ನು ಮುಖ್ಯಮಂತ್ರಿ ಪರ ವಾದ ಮಂಡಿಸಿದ ವಕೀಲ ರಾಜೀವ್ ಧವನ್, ರಾಜ್ಯ ಸರ್ಕಾರವನ್ನು ಬೀಳಿಸಲೆಂದೇ ವಿಪಕ್ಷ 11 ಶಾಸಕರೆಂಬ ಬೇಟೆಗಾರರನ್ನು ಬಳಸಿಕೊಳ್ಳುತ್ತಿದ್ದು, ನ್ಯಾಯಾಲಯ ಇದಕ್ಕೆ ಅವಕಾಶ ನೀಡದೇ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು.

ರಾಜೀನಾಮೆ ನೀಡಿದ ಶಾಸಕರಿಗೆ ಮಂತ್ರಿಗಿರಿಯ ಆಮೀಷವೊಡ್ಡಲಾಗಿದ್ದು, ಮಾಜಿ ಮುಖ್ಯಮಂತ್ರಿಯೊಬ್ಬರು ಈ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂದು ಧವನ್ ಗಂಭೀರ ಆರೋಪ ಮಾಡಿದರು.

5 ಅಲ್ಲ 15 ಶಾಸಕರ ಅರ್ಜಿ; ಐವರು ಶಾಸಕರ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ಆಮೀಷಗಳನ್ನು ಬೆನ್ನತ್ತಿ ಹೋಗಿರುವ ಶಾಸಕರ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸುವುದೇ ಉತ್ತಮ ಎಂದು ರಾಜೀವ್ ಧವನ್ ಮುಖ್ಯಮಂತ್ರಿ ಪರ ವಾದ ಮಂಡಿಸಿದರು.

ಕರ್ನಾಟಕ ರಾಜಕೀಯ ವಿಪ್ಲವಕ್ಕೆ ಸಂಬಂಧಿಸಿದ ಮೂರು ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ತ್ರಿಸದಸ್ಯ ಪೀಠ, ತೀರ್ಪನ್ನು ನಾಳೆ(ಜು.17) ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ