ಶಬರಿಮಲೆ ಬಂದ್: ಮರು ಪರಿಶೀಲನೆ ಅರ್ಜಿ ವಿಚಾರಣೆ ನ.13ಕ್ಕೆ!
ಮಹಿಳೆಯರ ಪ್ರವೇಶವಿಲ್ಲದೇ ಬಂದ್ ಆಯ್ತು ಅಯ್ಯಪ್ಪ ದೇವಸ್ಥಾನ! 6 ದಿನಗಳ ಮಾಸಿಕ ದರ್ಶನದ ಬಳಿಕ ಯ್ಯಪ್ಪ ದೇವಸ್ಥಾನ ಬಂದ್! ನ.13ಕ್ಕೆ ಸುಪ್ರೀಂ ಕೋರ್ಟ್ ನಿಂದ ಮರು ಪರಿಶೀಲನೆ ಅರ್ಜಿ ವಿಚಾರಣೆ! ಭಾರೀ ಪ್ರತಿಭಟನೆಯಿಂದ ಸಾಧ್ಯವಾಗದೇ ಹೋದ ಮಹಿಳೆಯರ ಪ್ರವೇಶ
ನವದೆಹಲಿ(ಅ.23): 10-50 ವರ್ಷದೊಳಗಿನ ಮಹಿಳೆಯರು ಅಯ್ಯಪ್ಪನ ದೇಗುಲ ಪ್ರವೇಶಿಸಲು ಅನುಮತಿ ನೀಡಿದ್ದ ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆಯನ್ನು ನ.13ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದ ಪದ್ಧತಿಯನ್ನು ಮುರಿಯುತ್ತಿರುವುದು ಸರಿಯಲ್ಲ ಎಂದು ಹೇಳುತ್ತಿರುವ ಅಯ್ಯಪ್ಪ ದೇಗುಲದ ಪೂಜಾರಿಗಳು ಹಾಗೂ ಭಕ್ತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ನಡುವೆಯೂ ಹಲವು ಮಹಿಳೆಯರು ಅಯ್ಯಪ್ಪನ ದೇಗುಲ ಪ್ರವೇಶ ಮಾಡಲು ಮುಂದಾಗಿ ವಿಫಲಗೊಂಡಿದ್ದಾರೆ.
ಸಂಪ್ರದಾಯದ ಪ್ರಕಾರ ದೇವಾಲಯದ ಬಾಗಿಲನ್ನು 6 ದಿನಗಳ ಮಾಸಿಕ ದರ್ಶನದ ಬಳಿಕ ನಿನ್ನೆ ರಾತ್ರಿ 10 ಗಂಟೆಗೆ ಬಂದ್ ಮಾಡಲಾಯಿತು. ನಿನ್ನೆಯಷ್ಟೇ ದೇಗುಲ ಹಾಗೂ ಅರ್ಜಿದಾರರ ಪರ ವಕೀಲರಾದ ಮ್ಯಾಥ್ಯೂ ಜೆ ನೆಡುಂಪಾರ, ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಪರಿಗಣಿಸುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.
ತೀರ್ಪಿನ ವಿರುದ್ಧ 19 ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ತಿಳಿಸಿದ್ದರು. ಇದರಂತೆ ಈ ಮನವಿಯನ್ನು ಪರಿಗಣಿಸಿರುವ ನ್ಯಾಯಾಲಯ ನ.13 ರಂದು ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದೆ.