ನವದೆಹಲಿ (ಜು. 10): ಸಲಿಂಗಕಾಮವನ್ನು ಅಪರಾಧ ಎಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಮುಂದೂಡಬೇಕು ಎಂಬ ಕೇಂದ್ರ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

ಅಲ್ಲದೆ, ಈ ಕುರಿತಾದ ನಿರ್ಣಾಯಕ ವಿಚಾರಣೆಯನ್ನು ಇಂದಿನಿಂದ  ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಹೇಳಿದೆ. ಇಬ್ಬರು ಸಲಿಂಗಿಗಳ ಒಪ್ಪಿತ ಲೈಂಗಿಕ ಕ್ರಿಯೆಯನ್ನು ಅಪರಾಧ ಪ್ರಕರಣವೆಂದು ಪರಿಗಣಿಸಲಾಗುವ ಸಂವಿಧಾನದ 377ನೇ ವಿಧಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ನೂತನವಾಗಿ ರಚಿಸಲಾದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಒಪ್ಪಿಗೆ ನೀಡಿದೆ.

ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ, ಸಲಿಂಗಕಾಮದ ಕುರಿತು ತನ್ನ ಅಭಿಪ್ರಾಯ ತಿಳಿಸಲು ನಾಲ್ಕು ವಾರಗಳ ಕಾಲಾವಧಿ ನೀಡಬೇಕು. ಅಲ್ಲಿಯವರೆಗೂ ಈ ವಿಚಾರಣೆ ಮುಂದೂಡಬೇಕು ಎಂಬ ಕೇಂದ್ರ ಸರ್ಕಾರದ ವಾದವನ್ನು ತಿರಸ್ಕರಿಸಿತು. 2009ರಲ್ಲಿ ಒಂದೇ ಲಿಂಗದ ನಡುವಿನ ಲೈಂಗಿಕ ಕ್ರಿಯೆಯನ್ನು ಅಪರಾಧವಲ್ಲ ಎಂಬುದಾಗಿ ದೆಹಲಿ ಹೈಕೋರ್ಟ್‌ ತೀರ್ಪು ನೀಡಿತ್ತು. ಆದರೆ, 2013ರಲ್ಲಿ ದೆಹಲಿ ಹೈಕೋರ್ಟ್‌ ತೀರ್ಪನ್ನು ವಜಾಗೊಳಿಸಿದ ಸುಪ್ರೀಂ, ಸಲಿಂಗಕಾಮ ಅಪರಾಧ ಎಂಬ ಹಳೆಯ ಕಾನೂನನ್ನು ಜಾರಿ ಮಾಡಿತ್ತು. ಇದೀಗ ಸುಪ್ರೀಂ ತೀರ್ಪನ್ನು ರದ್ದುಗೊಳಿಸಿ, ದೆಹಲಿ ಕೋರ್ಟ್‌ ತೀರ್ಪನ್ನು ಪುನಸ್ಥಾಪಿಸಬೇಕು ಎಂಬುದಾಗಿ ಹಲವರು ಅರ್ಜಿ ಸಲ್ಲಿಸಿದ್ದಾರೆ.